Vice Presidential Election | ವಿಪಕ್ಷದ ಸಂಸದರಿಗೆ ವಿಶೇಷ ಧನ್ಯವಾಧ ತಿಳಿಸಿದ ಕೇಂದ್ರ ಸಚಿವ ಕಿರಣ್​​ ರಿಜಿಜು!, ಕಾರಣವೇನು..?

Kiren Rijiju
Published on

Vice Presidential Election: ಮಂಗಳವಾರ (ಸೆಪ್ಟೆಂಬರ್​​ 10) ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಆತ್ಮಸಾಕ್ಷಿಯ ಮತ ನೀಡಿದ ಇಂಡಿಯಾ ಕೂಟದ ಸಂಸದರಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಧನ್ಯವಾದಗಳನ್ನು ತಿಳಿಸಿದ್ದಾರೆ.

ತಮ್ಮ ಎಕ್ಸ್​​​ ಖಾತೆಯಲ್ಲಿ ಪೊಸ್ಟ್​​ ಹಂಚಿಕೊಂಡಿರುವ ರಿಜಿಜು, ಉಪರಾಷ್ಟ್ರಪತಿ ಚುನಾವಣೆಯಲ್ಲಿ NDA ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರಿಗೆ 'ಆತ್ಮಸಾಕ್ಷಿ'ಯೊಂದಿಗೆ ಮತ ಚಲಾಯಿಸಿದ ವಿಪಕ್ಷದ ಸಂಸದರಿಗೆ ವಿಶೇಷ ಧನ್ಯವಾದಗಳು. ನಮ್ಮ ಮೈತ್ರಿಕೂಟದ ಎಲ್ಲ ಸಂಸದರು ಒಗ್ಗಟ್ಟಿನಿಂದ ಇದ್ದಾರೆ ಎಂದರು. ಭಾರತದ ಹೊಸ ಉಪರಾಷ್ಟ್ರಪತಿಯಾಗಿ ವಿನಮ್ರ ಮತ್ತು ದಕ್ಷ ವ್ಯಕ್ತಿ ಮತ್ತು ನಿಜವಾದ ದೇಶಭಕ್ತರನ್ನು ಆಯ್ಕೆ ಮಾಡಿದ್ದಕ್ಕಾಗಿ ಎಲ್ಲರಿಗೂ ಅಭಿನಂದನೆಗಳು ಎಂದು ರಿಜಿಜು ತಿಳಿಸಿದ್ದಾರೆ.

ಬಿ ಎಲ್​​ ಸಂತೋಷ್​​ ವ್ಯಂಗ್ಯ

ಇದೇ ವಿಷಯವಾಗಿ ಟ್ವೀಟ್​​ ಮಾಡಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್​ ಸಂತೋಷ್​​, ಇಂಡಿಯಾ ಮೈತ್ರಿಕೂಟದ ನಾಯಕರು ಆತ್ಮಸಾಕ್ಷಿಯ ಮತಕ್ಕಾಗಿ ಪ್ರಚಾರ ಮಾಡಿದ್ದರು, ಆದರೆ ಅದು ತಿರುಮಂತ್ರವಾಗಿದೆ ಎಂದು ಬರೆದುಕೊಂಡಿದ್ದಾರೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ರಾಧಾಕೃಷ್ಣನ್ ಅವರು ಇಂಡಿಯಾ ಬ್ಲಾಕ್‌ನ ನಾಮನಿರ್ದೇಶಿತ ನ್ಯಾಯಮೂರ್ತಿ ಬಿ ಸುದರ್ಶನ್ ರೆಡ್ಡಿ ಅವರನ್ನು 152 ಮತಗಳಿಂದ ಸೋಲಿಸಿದರು, ಎನ್​​ಡಿಎ ಅಭ್ಯರ್ಥಿ ರಾಧಾಕೃಷ್ಣನ್ 452 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದರೆ, ನ್ಯಾಯಮೂರ್ತಿ ರೆಡ್ಡಿ 300 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದರು. ಹದಿನೈದು ಮತಗಳನ್ನು ಅಮಾನ್ಯವೆಂದು ಪರಿಗಣಿಸಲಾಯಿತು.

ಗೆಲುವಿನ ಘೋಷಣೆ

ಎನ್‌ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರು 452 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದರು. ಅವರು ಭಾರತದ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ, ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ 300 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದರು ಎಂದು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜುಲೈ 21, 2025 ರಿಂದ ಉಪಾಧ್ಯಕ್ಷ ಸ್ಥಾನ ಖಾಲಿಯಾಗಿದೆ, ಜಗದೀಪ್ ಧಂಖರ್ ಅನಾರೋಗ್ಯದ ಕಾರಣಗಳನ್ನು ಉಲ್ಲೇಖಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net