ಉಪರಾಷ್ಟ್ರಪತಿ ಚುನಾವಣೆ; ನಾಳೆ ಸಂಜೆ ಎನ್​ಡಿಎ ಮೈತ್ರಿಕೂಟದ ಅಭ್ಯರ್ಥಿ ಅಂತಿಮವಾಗುವ ಸಾಧ್ಯತೆ| Vice President

PM Modi 2
Published on

Vice President: ಮುಂದಿನ ತಿಂಗಳು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಎನ್​ಡಿಎ ಮೈತ್ರಿಕೂಟದ ಒಮ್ಮತದ ಅಭ್ಯರ್ಥಿ ಆಯ್ಕೆಗೆ ನಾಳೆ (ಆಗಸ್ಟ್ 17) ಸಂಜೆ ಬಿಜೆಪಿ ಸಂಸದೀಯ ಸಭೆ ನಡೆಯಲಿದ್ದು, ಸಭೆಯಲ್ಲಿ ಅಭ್ಯರ್ಥಿಯ ಹೆಸರು ಅಂತಿಮವಾಗುವ ಸಾಧ್ಯತೆ ಇದೆ ಎಂದು ಇಂದು ವರದಿಯಾಗಿದೆ.

ಶುಕ್ರವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ, ಕೇಂದ್ರ ಗೃಹ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಹಲವು ಹಿರಿಯ ಬಿಜೆಪಿ ನಾಯಕರು ಉಪರಾಷ್ಟ್ರಪತಿ ಅಭ್ಯರ್ಥಿತ್ವದ ಕುರಿತು ತಾಸುಗಟ್ಟಲೇ ಚರ್ಚಿಸಿದ್ದಾರೆ ಎನ್ನಲಾಗಿದೆ.

ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಅಭ್ಯರ್ಥಿಯನ್ನು ನಿರ್ಧರಿಸುವ ಜವಾಬ್ದಾರಿಯನ್ನು ಎನ್‌ಡಿಎ ಕೂಟ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾಗೆ ವಹಿಸಿದೆ. ಈಗಾಗಲೇ ಕೆಲವು ಹೆಸರುಗಳನ್ನು ಪರಿಗಣಿಸಿದ್ದು, ಅದರಲ್ಲಿ ಒಂದನ್ನು ಸಂಸದೀಯ ಸಭೆಯಲ್ಲಿ ಒಮ್ಮತಕ್ಕೆ ತಂದು ಘೋಷಿಸುವ ಸಾಧ್ಯತೆ ಇದೆ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಆರ್‌ಎಸ್‌ಎಸ್ ಸಿದ್ಧಾಂತವಾದಿ ಬಿಜೆಪಿ ಹಿರಿಯ ಸದಸ್ಯ ಶೇಷಾದ್ರಿ ಚಾರಿ ಹೆಸರಿನ ಜೊತೆ ಕೆಲವು ಹಾಲಿ ಮತ್ತು ಮಾಜಿ ರಾಜ್ಯಪಾಲರ ಹೆಸರುಗಳು ಚರ್ಚೆಯಲ್ಲಿವೆ ಎನ್ನಲಾಗಿದೆ. ಏತನ್ಮಧ್ಯೆ, ಎನ್‌ಡಿಎ ಆಡಳಿತವಿರುವ ರಾಜ್ಯಗಳ ಎಲ್ಲಾ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಆಗಸ್ಟ್ 21 ರಂದು ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿಗೆ ನಾಮಪತ್ರ ಸಲ್ಲಿಸುವ ವೇಳೆ ದೆಹಲಿಯಲ್ಲಿ ಇರುವಂತೆ ಬಿಜೆಪಿ ಸೂಚಿಸಿದೆ. ಇದಕ್ಕೂ ಮುನ್ನ ಆಗಸ್ಟ್ 20 ರಂದು ಎನ್‌ಡಿಎ ಕೂಟದ ಡಿನ್ನರ್ ಸಭೆ ನಡೆಯುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಒಮ್ಮತದ ಅಭ್ಯರ್ಥಿಯ ಹೆಸರನ್ನು ಅನುಮೋದಿಸಿ ಘೋಷಿಸಲಾಗುತ್ತದೆ.

ಉಪರಾಷ್ಟ್ರಪತಿ ಚುನಾವಣೆಯ ಮತದಾನದ ಕಾರ್ಯವಿಧಾನಗಳ ಕುರಿತು ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆಯುವ ಕಾರ್ಯಾಗಾರದಲ್ಲಿ ಭಾಗವಹಿಸಲು ಸೆಪ್ಟೆಂಬರ್ 6 ರಿಂದ 9 ರವರೆಗೆ ದೆಹಲಿಯಲ್ಲಿಯೇ ಇರುವಂತೆ ಬಿಜೆಪಿ ತನ್ನ ರಾಜ್ಯಸಭೆ ಮತ್ತು ಲೋಕಸಭೆಯ ಸಂಸದರಿಗೆ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net