More

  ದೇಶಕ್ಕಾಗಿ ಶ್ರಮ, ದೈಹಿಕ ಸದೃಢತೆಗಾಗಿ ಓಟ

  ನಿವೃತ್ತ ಕರ್ನಲ್​ ಕೆ.ತಮ್ಮಯ್ಯ ದಂಪತಿ ಸಾಧನೆ | ಬಾರ್ಡರ್​ನಲ್ಲಿ 436 ಕಿಮೀ ರನ್​

  ಪ್ರಶಾಂತ ಭಾಗ್ವತ, ಉಡುಪಿ
  ವಯಸ್ಸಾದಂತೆ ದೈಹಿಕ ಚೈತನ್ಯ ಕಡಿಮೆಯಾಗಿ ನಿತ್ಯದ ಚಟುವಟಿಕೆಗೆ ಹಿನ್ನಡೆ ಆಗವುದು ಸಹಜ. ಆದರೆ, ಓಟ (ರನ್ನಿಂಗ್​)ದ ಮೂಲಕ ವೃದ್ಧಾಪ್ಯದಲ್ಲೂ ಸಹ ದೈಹಿಕ ಶ್ರಮತೆ, ಸದೃಢತೆ ಹೊಂದಲು ಸಾಧ್ಯ ಎನ್ನುವುದನ್ನು ಉಡುಪಿಯ ನಿವೃತ್ತ ಕರ್ನಲ್​ ಕೆ.ತಮ್ಮಯ್ಯ ಉಡುಪ ಹಾಗೂ ಪ್ರಸೂತಿ-ಸ್ತ್ರೀ ರೋಗ ತಜ್ಞೆ ಡಾ. ಸಂಧ್ಯಾ ಆಲಟ್ಟಿ ದಂಪತಿ ಸಾಬೀತುಪಡಿಸಿದ್ದಾರೆ.

  ಕಳೆದ ಮಾರ್ಚ್​ ಹಾಗೂ ಏಪ್ರಿಲ್​ ತಿಂಗಳಲ್ಲಿ ಗುಜರಾತ್​ ಸಮೀಪದ ದಿಯು ಎಂಬಲ್ಲಿ ಆಯೋಜಿಸಿದ್ದ ವೆಟರನ್ಸ್​ ಅಲ್ಟ್ರಾ 1000ಕೆ ರನ್ ಎಂಬ ‘ದೇಶಕ್ಕಾಗಿ ಶ್ರಮ- ಸದೃಢತೆಗಾಗಿ ಓಟ’ದಲ್ಲಿ ಪಾಲ್ಗೊಂಡು ಸಾಧನೆ ಮೆರೆದಿದ್ದಾರೆ.

  Running1
  ಜಮ್ಮು-ಕಾಶ್ಮೀರ ಲೆಗ್​ನಲ್ಲಿ ಓಟ ಮಾಡುತ್ತಿರುವ ಡಾ. ಸಂಧ್ಯಾ ಆಲಟ್ಟಿ.

  4 ವಿಭಾಗಗಳಲ್ಲಿ ಓಟ

  ಗುಜರಾತ್​ ಲೆಗ್​ (303 ಕಿಮೀ, 9 ದಿನ), ರಾಜಸ್ಥಾನ ಲೆಗ್​ (278 ಕಿಮೀ 8 ದಿನ), ಪಂಜಾಬ್​ ಲೆಗ್​ (307ಕಿಮೀ, 8 ದಿನ), ಹಾಗೂ ಜಮ್ಮು-ಕಾಶ್ಮೀರ ಲೆಗ್​ (112 ಕಿಮೀ, 6 ದಿನ) ಎಂದು 4 ವಿಭಾಗಗಳಲ್ಲಿ ಓಟ ಆಯೋಜಿಸಲಾಗಿತ್ತು. ಇದರಲ್ಲಿ ಕರ್ನಲ್​ ಕೆ.ತಮ್ಮಯ್ಯ ಅವರು ಗುಜರಾತ್​ ಹಾಗೂ ಜಮ್ಮು-ಕಾಶ್ಮೀರ ಲೆಗ್​ನಲ್ಲಿ ಪಾಲ್ಗೊಂಡು 13 ದಿನದಲ್ಲಿ 436 ಕಿ.ಮೀ. ರನ್ನಿಂಗ್​ ಮಾಡಿದ್ದಾರೆ. ಡಾ. ಸಂಧ್ಯಾ ಅವರು ಇದೇ ಲೆಗ್​ಗಳಲ್ಲಿ ಭಾಗಿಯಾಗಿ 341 ಕಿಮೀ ಯಶಸ್ವಿಯಾಗಿ ಓಟ ಮುಗಿಸಿ ಗಮನ ಸೆಳೆದಿದ್ದಾರೆ.

  ನಿತ್ಯ 5 ತಾಸು ಓಟ

  ಪ್ರತಿದಿನ ಬೆಳಗ್ಗೆ 5 ಗಂಟೆಗೆ ಓಟ ಆರಂಭವಾಗಿ 10ರ ವರೆಗೆ ಓಟ ಸಾಗುತ್ತಿತ್ತು. ದಿಯುವಿನಿಂದ ಕೋಡಿನಾರ್​, ಸೋಮನಾಥ, ಮಾಧವಪುರ್​, ಪೋರಬಂದರ್​, ದ್ವಾರಕಾ ಹಾಗೂ ಓಖಾ ಮಾರ್ಗವಾಗಿ ಬಾರ್ಡರ್​ಗಳಲ್ಲಿ ಓಟ ಸಾಗಿತ್ತು. ಸ್ಥಳೀಯ ಜನರಿಂದಲೂ ಉತ್ತಮ ಪ್ರೋತ್ಸಾಹ ಲಭಿಸುತ್ತಿತ್ತು. ಓಟದ ಮೊದಲು ಹಾಗೂ ನಂತರ 15 ನಿಮಿಷ ವ್ಯಾಯಾಮದ ಮೂಲಕ ಆಯಾಸ ನೀಗಿಸಿಕೊಳ್ಳಲಾಗುತ್ತಿತ್ತು.

  ಅಡ್ಡಿಯಾಗದ ವೃದ್ಧಾಪ್ಯ

  ಸೇನೆಯಲ್ಲಿ ಕೆಲಸ ಮಾಡುವಾಗ ಯೋಧರಿಗೆ ಪ್ರತಿದಿನವೂ ಸವಾಲು ಇರುತ್ತದೆ. ಹೀಗಾಗಿ ನಿವೃತ್ತರಾದ ಬಳಿಕವೂ ಜೀವನದಲ್ಲಿ ಎದುರಾಗುವ ಸವಾಲು ಎದುರಿಸಬೇಕು. ನನ್ನ ಪತ್ನಿಗೆ 60 ವರ್ಷ. ಆಕೆ ಮೊದಲು ಮನೆಯ ಸಮೀಪ 400 ಮೀಟರ್​ ಓಟ ಆರಂಭಿಸಿದಳು. ಅದನ್ನು ದ್ವಿಗುಣಗೊಳಿಸಿ ಮೈಗೂಡಿಸಿಕೊಂಡಳು. 5ಕೆ, 10ಕೆ, ಹಾಫ್ ಮ್ಯಾರಥಾನ್​ನಲ್ಲಿ ಪಾಲ್ಗೊಂಡು ಬಹುಮಾನವನ್ನೂ ಗೆದ್ದಳು. ನನಗೆ 67 ವರ್ಷ. ನಾನು ಬಹಳ ದೂರದ ವರೆಗೆ ಓಟ ಮಾಡುವುದನ್ನು ರೂಢಿಸಿಕೊಂಡಿದ್ದೇನೆ. ಪ್ರತಿದಿನವೂ ಬೆಳಗ್ಗೆ ಉಡುಪಿ-ಮಣಿಪಾಲದಲ್ಲಿ 10 ಕಿ.ಮೀ. ಓಡುತ್ತೇನೆ. ಸಾಧನೆಗೆ ವೃದ್ಧಾಪ್ಯ ಅಡ್ಡಿಯಾಗದು. ಅಚಲ ವಿಶ್ವಾಸದಿಂದ ಎಲ್ಲವೂ ಸಾಧ್ಯ. ಓಟದಿಂದ ಬದುಕು ನೆಮ್ಮದಿ ಕಾಣುತ್ತದೆ. ಉಡುಪಿ-ಮಣಿಪಾಲದ ಯುವ ಸಮುದಾಯ, ಉದ್ಯೋಗ ನಿವೃತ್ತರು ಓಟದಲ್ಲಿ ಆಸಕ್ತಿ ಹೊಂದಿದ್ದರೆ ನನ್ನನ್ನು (ಮೊ. 9902027826) ಸಂಪರ್ಕಿಸಬಹುದು ಎನ್ನುತ್ತಾರೆ ಕೆ.ತಮ್ಮಯ್ಯ ಉಡುಪ.

  Running2
  ಗುಜರಾತ್​ ಲೆಗ್​ನಲ್ಲಿ ಓಡುತ್ತಿರುವ ನಿವೃತ್ತ ಕರ್ನಲ್​ ಕೆ.ತಮ್ಮಯ್ಯ ಉಡುಪ.

  ದೇಶದ ಗಡಿ ಭಾಗಗಳಲ್ಲಿ ರನ್ನಿಂಗ್​

  ಆರೋಗ್ಯಜಕರ ಜೀವನ ಶೈಲಿ, ದೇಶದ ಗಡಿ ಭಾಗಗಳಲ್ಲಿನ ಸಮಸ್ಯೆ-ಸವಾಲು ಪರಿಹಾರಾರ್ಥವಾಗಿ ಹಾಗೂ ಯೋಧರ ತ್ಯಾಗ-ಬಲಿದಾನವನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ಈ ಓಟ ಆಯೋಜಿಸಲಾಗಿತ್ತು. ಇಂಡಿಯನ್​ ಮಿಲಿಟರಿ ಅಕಾಡೆಮಿಯ (ಐಎಂಎ) 21 ಪಾರಾ ಕಮಾಂಡರ್​ (ಸ್ಪೆಷಲ್​ ಫೋರ್ಸ್​)ನ ನಿವೃತ್ತ ಕರ್ನಲ್​ ಮನ್​ದೀಪ್​ ಸಿಂಗ್​ ಮಾನ್​ ಈ ಓಟ ಆಯೋಜಿಸಿದ್ದರು. ಕೇಂದ್ರಾಡಳಿತ ಪ್ರದೇಶವಾದ ಹಾಗೂ ಬಾರ್ಡರ್​ ಭಾಗವಾದ ದಿಯುವಿನ ‘ಐಎನ್​ಎಸ್​ ಖುಕ್ರಿ ಸ್ಮಾರಕ’ದಲ್ಲಿ ಮಾರ್ಚ್​ 2ರಂದು ರೇರ್​ ಅಡ್ಮಿರಲ್​ ಅನಿಲ್​ ಜಗ್ಗಿ ಚಾಲನೆ ನೀಡಿದರು. ಏಪ್ರಿಲ್​ 10ರಂದು ಉಧಮ್​ಪುರ್​ (ಜಮ್ಮು-ಕಾಶ್ಮೀರ)ದಲ್ಲಿ ಮುಕ್ತಾಯಗೊಂಡಿತು. ವೃದ್ಧಾಪ್ಯದಲ್ಲಿರುವ ನಿವೃತ್ತ ಸೈನಿಕರು ಈ ಓಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಓಟದಲ್ಲಿ ಪಾಲ್ಗೊಂಡ ಡಾ. ಸಂಧ್ಯಾ ಅವರು ದೇಶದ ಏಕೈಕ ಮಹಿಳೆಯಾಗಿದ್ದರು.

  ಇಂದಿನ ಯಾಂತ್ರಿಕ ಜೀವನ ಶೈಲಿಯಿಂದ ಮಹಿಳೆಯರು ಮನೆಯಲ್ಲಿ ಎಷ್ಟೇ ಕೆಲಸ ಮಾಡಿದರೂ ಸಹ ದೈಹಿಕ ಸದೃಢತೆ ಇರುವುದಿಲ್ಲ. ಹೀಗಾಗಿ ಪ್ರತಿನಿತ್ಯ ಬೆಳಗ್ಗೆ ಅರ್ಧ ಗಂಟೆಯಾದರೂ ವ್ಯಾಯಾಮ, ಯೋಗ, ವಾಕಿಂಗ್​, ರನ್ನಿಂಗ್​ ಮಾಡಿದರೆ ಮಾತ್ರ ದೇಹ ಗಟ್ಟಿಯಾಗಿರಲು ಸಾಧ್ಯ. ರೂಢಿಸಿಕೊಂಡರೆ ವೃದ್ಧಾಪ್ಯದಲ್ಲೂ ರನ್ನಿಂಗ್​ ಮಾಡಬಹುದು.

  ಡಾ. ಸಂಧ್ಯಾ ಆಲಟ್ಟಿ. ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ. ಉಡುಪಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts