ಬಾಲಿವುಡ್ ಹಿರಿಯ ನಟಿ ಶಶಿಕಲಾ ನಿಧನ

shas
Published on

ಮುಂಬೈ : ಬಾಲಿವುಡ್​ನ ಹಿರಿಯ ನಟಿ ಶಶಿಕಲಾ ಅವರು ಇಂದು ತಮ್ಮ ಕೊಲಾಬಾದ ನಿವಾಸದಲ್ಲಿ ಕೊನೆಯುಸಿರೆಳೆದರು. ನೂರಕ್ಕೂ ಹೆಚ್ಚು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದ ಶಶಿಕಲಾ, 88 ವರ್ಷ ವಯಸ್ಸಿನವರಾಗಿದ್ದರು. ಕಪ್ಪು ಬಿಳುಪು ಚಿತ್ರಗಳಲ್ಲಿ ಮತ್ತು ಈಸ್ಟ್​ಮನ್​ ಕಲರ್ ಚಿತ್ರಗಳಲ್ಲಿ ನಟಿಸಿದ್ದಲ್ಲದೆ, ಇತ್ತೀಚಿನ ಹೈಟೆಕ್ ಚಿತ್ರಗಳಲ್ಲೂ ಕೆಲಸ ಮಾಡಿದ ಹೆಗ್ಗಳಿಕೆ ಅವರದ್ದಾಗಿತ್ತು.

ಆಗಸ್ಟ್ 1932 ರಲ್ಲಿ ಮಹಾರಾಷ್ಟ್ರದ ಸೋಲಾಪುರಕ್ಕೆ ಸೇರಿದ ಕುಟುಂಬದಲ್ಲಿ ಜನಿಸಿದ ಶಶಿಕಲಾ, 2007ನೇ ವರ್ಷದ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರ ಪಡೆದಿದ್ದರು. 2009 ರಲ್ಲಿ ವಿ.ಶಾಂತಾರಾಂ ಅವಾರ್ಡ್ಸ್​ನ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದಿದ್ದರು. ಬಾಲಿವುಡ್ ನಟ ದಿವಂಗತ ಓಮ್​ಪ್ರಕಾಶ್ ಸೇಗಲ್​ ಅವರ ಪತ್ನಿಯಾಗಿದ್ದರು.

ತೀನ್ ಬಟ್ಟಿ ಚಾರ್ (1953), ರಾಸ್ತಾ, ತೀನ್ ಬಹುರಾಣಿಯಾ (1968), ಡಾಕು, ಗುಮರಾಹ್, ಸುಜಾತ, ಮುಂತಾದ ಹಿಂದಿ ಚಿತ್ರಗಳಲ್ಲಿ ಅವರ ನಟನೆ ಮೆಚ್ಚುಗೆ ಪಡೆದಿತ್ತು. ಟಿವಿ ಧಾರಾವಾಹಿಗಳಲ್ಲೂ ನಟಿಸಿದ್ದ ಅವರು, ಸೋನ್‌ಪರಿ ಮತ್ತು ಜೀನಾ ಇಸಿ ಕಾ ನಾಮ್ ಹೈ ಜನಪ್ರಿಯ ಕಾರ್ಯಕ್ರಮಗಳ ಭಾಗವಾಗಿದ್ದರು. ಪೋಷಕ ನಟಿಯಾಗಿ ಹಲವಾರು ಚಿತ್ರಗಳಲ್ಲಿ ನಟಿಸಿರುವ ಶಶಿಕಲಾ ಅವರ ಇತ್ತೀಚಿನ ಚಿತ್ರಗಳು ಕಭಿ ಖುಷಿ ಕಭಿ ಘಮ್ ಮತ್ತು ಮುಝ್​ಸೆ ಶಾದಿ ಕರೋಗಿ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net