

ಭೋಪಾಲ್ : ಹೆದ್ದಾರಿಯನ್ನು ದಾಟುತ್ತಿದ್ದ ಹುಲಿಯು ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ಉಮಾರಿಯ ಜಿಲ್ಲೆ ವ್ಯಾಪ್ತಿಯ ಗುನ್ಘುಟ್ಟಿ ಅರಣ್ಯ ವಲಯದಲ್ಲಿ ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ 35 ಕಿಲೋಮೀಟರ್ ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 43 ರಲ್ಲಿ ನಡೆದಿರುವ ದುರ್ಘಟನೆಯಲ್ಲಿ, ಮೃತಪಟ್ಟಿರುವ ಹುಲಿಯು ಸಮೀಪದ ಬಂಧವಗಡ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸೇರಿದ್ದಲ್ಲ. ಅದರ ವಯಸ್ಸು ಮತ್ತಿತರ ವಿವರಗಳನ್ನು ತಿಳಿಯಲು ಫೊರೆನ್ಸಿಕ್ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಉಮಾರಿಯ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್ಒ) ಮೋಹಿತ್ ಸೂದ್ ಹೇಳಿದ್ದಾರೆ.
"ಈ ರೀತಿಯ ಅಪಘಾತಗಳು ಮುಂದೆ ನಡೆಯದಂತೆ ರಸ್ತೆಬದಿಗಳಲ್ಲಿ ಸೈನ್ಬೋರ್ಡ್ಗಳನ್ನು ಹಾಕಲು ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೇನೆ. ಹೆದ್ದಾರಿಯ ವಾಹನ ಚಾಲಕರು ಎಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗುವುದು" ಎಂದಿರುವ ಡಿಎಫ್ಒ ಸೂದ್, ಹೆದ್ದಾರಿಯಲ್ಲಿ ಸ್ಪೀಡ್ಬ್ರೇಕರ್ಗಳನ್ನು ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನೂ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ. (ಏಜೆನ್ಸೀಸ್)