ಮಂಗಳೂರು : ರಾಜ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿನ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಸಂಚಾರದ ಗಣತಿ ಫೆ.17ರಂದು ಸಾಯಂಕಾಲ 6ರಿಂದ ಫೆ.24 ರಂದು ಸಾಯಂಕಾಲ 6ರವರೆಗೆ
ನಡೆಯಲಿದೆ. ದ.ಕ. ಜಿಲ್ಲೆಯಲ್ಲಿ ಈ ಗಣತಿಗೆ ಸುಮಾರು 126 ಗಣತಿ ಕೇಂದ್ರಗಳನ್ನು ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಆಯ್ಕೆ ಮಾಡಲಾಗಿದೆ.
ವಾಹನ ಸಂಚಾರದ ಬೆಳವಣಿಗೆ ತೀವ್ರತೆಯನ್ನು ಗಮನಿಸಿ ರಸ್ತೆಗಳ ಮೇಲ್ಮೈಯನ್ನು ಅಭಿವೃದ್ಧಿ ಪಡಿಸುವುದು, ರಸ್ತೆಗಳನ್ನು ಅಗಲಪಡಿಸುವುದು ಹಾಗೂ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು ಈ ಗಣತಿಯ ಮುಖ್ಯ ಉದ್ದೇಶವಾಗಿದೆ.
ವಾಹನ ಸಂಚಾರ ವಿವರಗಳನ್ನು ಸಂಗ್ರಹಿಸಲು ದ.ಕ. ಜಿಲ್ಲೆಯ 126 ಗಣತಿ ಕೇಂದ್ರಗಳಲ್ಲಿ ಸಹಾಯಕ ಇಂಜಿನಿಯರ್ ಹಾಗೂ ಕಿರಿಯ ಇಂಜಿನಿಯರ್‌ಗಳನ್ನು ನೇಮಿಸಲಾಗಿದೆ. ಫೆ.17 ರಿಂದ ನಡೆಸಲಾಗುವ ಈ ವಾಹನ ಸಂಚಾರದ ಗಣತಿಯನ್ನು ಯಶಸ್ವಿಯಾಗಿ ನಡೆಸಲು ವಾಹನ ಚಾಲಕರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.
………………………….
