

ಮಂಡ್ಯ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಜಿಲ್ಲಾ ಬಸವ ಸಮಿತಿ ಹಾಗೂ ವೀರಶೈವ ಲಿಂಗಾಯತ ಸೌಹಾರ್ದ ಮತ್ತು ಸಹಕಾರಿ ಸಂಘಟನೆಗಳ ಸಹಕಾರದೊಂದಿಗೆ ಮೇ 31ರಂದು ನಗರದ ಕೆಎಸ್ಆರ್ಟಿಸಿ ಡಿಪೋ ಬಳಿಯ ಮೈಷುಗರ್ ಮೈದಾನದಲ್ಲಿ ವಿಶ್ವಗುರು ಬಸವೇಶ್ವರರ 892ನೇ ಜಯಂತಿ ಆಯೋಜಿಸಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಎಸ್.ಆನಂದ್ ಹೇಳಿದರು.
ಅಂದು ಬೆಳಗ್ಗೆ 10.30ಕ್ಕೆ ಶಿವಕುಮಾರ ಸ್ವಾಮೀಜಿ ವೇದಿಕೆಯಲ್ಲಿ ಆಯೋಜಿಸಲಿರುವ ಸಮಾರಂಭದಲ್ಲಿ ಉತ್ತರಕನ್ನಡ ಜಿಲ್ಲೆಯ ಬಸವಧಾಮದ ಬಸವೇಶ್ವರಿ ಮಾತಾಜಿ ಅವರು ಬಸವ ದರ್ಶನ ಪ್ರವಚನವನ್ನು ನೀಡಲಿದ್ದಾರೆ. ಸುತ್ತೂರು ಮಠಾಧ್ಯಕ್ಷ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಕಾಡಸಿದ್ದೇಶ್ವರ ಮಠಾಧ್ಯಕ್ಷ ಡಾ.ಕರಿವೃಷಭದೇಶಿಕೇಂದ್ರ ಶಿವಯೋಗಿ ಸ್ವಾಮೀಜಿ, ಕನಕಪುರ ದೇಗುಲಮಠದ ಚನ್ನಬಸವ ಸ್ವಾಮೀಜಿ, ಮಳವಳ್ಳಿ ಹೊರಮಠದ ಚಂದ್ರಶೇಖರಸ್ವಾಮೀಜಿ, ಚಂದ್ರವನ ಆಶ್ರಮದ ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಬಸವೇಶ್ವರರ ಭಾವಚಿತ್ರ ಅನಾವರಣಗೊಳಿಸುವರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಮಹದೇವ ಬಿದರಿ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.
ಜಿಲ್ಲೆಯ ಎಲ್ಲ ಶಾಸಕರು, ಪಕ್ಷಗಳ ಮುಖಂಡರು, ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಅನ್ನದಾಸೋಹ ಮಾಡಲಿದ್ದು, ದೇಣಿಗೆ ನೀಡಲು ಇಚ್ಛಿಸುವವರು ಮಹಾಸಭಾವನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ಜಿಲ್ಲಾ ಬಸವ ಸಮಿತಿ ಅಧ್ಯಕ್ಷ ಎಂ.ಬಿ.ರಾಜಶೇಖರ್, ಅರುಣ್ಕುಮಾರ್, ಕೆ.ಎಸ್.ದರ್ಶನ್, ಷಡಕ್ಷರಿ, ರಮೇಶ್, ದೀಪಕ್ಕುಮಾರ್ ಇದ್ದರು.