ಗ್ರಾಮಸ್ಥರಿಂದ ಕಾಡು ಉಳಿಸಿ ಬೆಳೆಸುವ ಕಾರ್ಯ : ಸುನಿಲ್ ಜೆ.ಬಿ.ಡಿಸೋಜ ಕರೆ

New Project (24)
Published on

ಬಂಟ್ವಾಳ: ಅರಣ್ಯ ಇಲಾಖೆ ಬಂಟ್ವಾಳ ವಲಯ, ಕರ್ನಾಟಕ ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಜೀವವೈವಿಧ್ಯ ಸಂರಕ್ಷಣಾ ಯೋಜನೆಯಲ್ಲಿ ಸ್ಥಾಪಿಸಲಾದ ವೀರಕಂಬ ಗ್ರಾಮ ಅರಣ್ಯ ಸಮಿತಿಯ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಬಂಟ್ವಾಳದಲ್ಲಿ ನಡೆಯಿತು.

ವಲಯ ಅರಣ್ಯಾಧಿಕಾರಿ ಸುನಿಲ್ ಜೆ.ಬಿ.ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು. ಅರಣ್ಯ ಸಂಪತ್ತನ್ನು ಉಳಿಸಿ ಪೋಷಣೆ ಮಾಡುವ ಜವಾಬ್ದಾರಿ ಗ್ರಾಮಸ್ಥರಿಗೂ ಇದೆ. ಅಧಿಕಾರಿಗಳು ಇಲಾಖೆಗೆ ಕರ್ತವ್ಯದ ದೃಷ್ಟಿಯಿಂದ ಬರುತ್ತಾರೆ, ಹೋಗುತ್ತಾರೆ. ಆದರೆ ಗ್ರಾಮದ ಜನರ ಭವಿಷ್ಯದ ದೃಷ್ಟಿಯಿಂದ ಕಾಡು, ನಾಡು ಎರಡನ್ನೂ ಉಳಿಸಿಕೊಳ್ಳುವಂತೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವನಾಥ ಎಂ. ಮಾತನಾಡಿದರು. ವೀರಕಂಬ ಗ್ರಾಪಂ ಸದಸ್ಯ ಜಯಪ್ರಸಾದ್ ಶೆಟ್ಟಿ, ಕಲ್ಲಡ್ಕ ರೈತ ಸೇವಾ ಸಹಕಾರಿ ಸಂಘದ ನಿರ್ದೇಶಕ ಕೊರಗಪ್ಪ ಗೌಡ, ಗ್ರಾಮ ಅರಣ್ಯ ಸಮಿತಿಯ ಸದಸ್ಯರಾದ ಚಂದ್ರಶೇಖರ್ ಬಾಯಿಲ, ಎಂ.ಆರ್.ನೋಣಯ್ಯ, ಅಬ್ದುಲ್ ಖಾದರ್, ಮೀನಾಕ್ಷಿ, ಬೇಬಿ ಜೆ.ಆಳ್ವ, ಗಿರಿಜಾ ಉಪಸ್ಥಿತರಿದ್ದರು. ಅರಣ್ಯ ಸಮಿತಿ ಸದಸ್ಯರಾದ ತೇಜಾಕ್ಷಿ ಸ್ವಾಗತಿಸಿದರು. ಉಪವಲಯ ಅರಣ್ಯಾಧಿಕಾರಿ ರವಿರಾಜ ಬಿ. ವರದಿ ವಾಚಿಸಿದರು.

ರೇವತಿ ವಂದಿಸಿದರು. ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಅರಣ್ಯಪಾಲಕರಾದ ಶೋಭಿತ್ ಕುಮಾರ್ ಮತ್ತು ದಯಾನಂದ, ಅರಣ್ಯ ವೀಕ್ಷಕ ಪ್ರವೀಣ್ ಕೆ. ಸಹಕರಿಸಿದರು.

ಕಾಳ್ಕಿಚ್ಚಿನ ಭೀತಿಗೆ ಅಗ್ನಿಶಾಮಕದಳ

ಗಸ್ತು ಅರಣ್ಯ ಪಾಲಕರ ವಸತಿಗೃಹ ಹಳೆಯದಾಗಿದ್ದು ನೂತನ ಸುಸಜ್ಜಿತ ವಸತಿಗೃಹ ನಿರ್ಮಾಣ ಮಾಡುವುದು ಅತಿ ಅಗತ್ಯ. ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಬೇಕು. ಇದರ ಜತೆಗೆ ಗ್ರಾಮ ಅರಣ್ಯ ಸಮಿತಿಗೆ ಕಟ್ಟಡದ ಅವಶ್ಯಕತೆ ಇದ್ದು ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ಪ್ರತಿ ವರ್ಷ ಈ ಭಾಗದ ಅರಣ್ಯಕ್ಕೆ ಬೆಂಕಿ ಬೀಳುತ್ತಿದ್ದು, ಬೇಸಿಗೆ ಕಾಲದಲ್ಲಿ ಹೆಚ್ಚುವರಿಯಾಗಿ ಅರಣ್ಯ ವೀಕ್ಷಕ ಮತ್ತು ಅಗ್ನಿಶಾಮಕ ದಳದ ವಾಹನ ಬೇಕು ಎಂದು ವಿಶ್ವನಾಥ ಎಂ. ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net