

ವಿಜಯವಾಣಿ ಸುದ್ದಿಜಾಲ ಉಡುಪಿ
ಮಣಿಪಾಲದ ಡಾ. ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ನ ವೀಣಾ ಕಲಿಕೆಯ ಸಂಸ್ಥೆಯಾದ ಕಲಾಸ್ಪಂದನದ 30ನೇ ವಾರ್ಷಿಕೋತ್ಸವದ ನಿಮಿತ್ತ ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಇತ್ತೀಚೆಗೆ ವೀಣಾ ತ್ರಿಂಶತ್ ಕಾರ್ಯಕ್ರಮ ನಡೆಯಿತು.
ಸುಗುಣೇಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹಿರಿಯರಾದ ಲೀಲಾ ಆಚಾರ್, ದೇವಕಿ ಕೆ. ಭಟ್, ಶೈಲಾ ರಾವ್, ಸ್ನೇಹಪ್ರಭಾ ಮತ್ತು ಶಂಕರಿ ಭಟ್ ಪಂಚಮಾತೆಯರಾಗಿ ಕಾರ್ಯಕ್ರಮ ಉದ್ಘಾಟಿಸಿದರು.
ದೇವತೆಯರಾದ ಸರಸ್ವತಿ, ಲಲಿತಾ ಹಾಗೂ ರುದ್ರ, ರಾಘವೇಂದ್ರ ಸ್ವಾಮಿ, ಹನುಮನ ವೇಷ-ಭೂಷಣ ತೊಟ್ಟು ವೀಣಾ ಪ್ರಸ್ತುತಿ, ಸಾಮವೇದ ವೀಣಾ ನಾದ, ಬಾಲಾಂಜನೇಯನಿಂದ ವೀಣಾ ವಾದನ, ನೃತ್ಯದಲ್ಲಿ ವೀಣಾ ನಾದ, ಪಂಚವೀಣೆ ಮತ್ತು ವಿದ್ಯಾರ್ಥಿಗಳಿಂದ ವೀಣಾ ವಾದನ ಹೀಗೆ ವೀಣೆಯಲ್ಲಿನ ವಿವಿಧ ಸಾಧ್ಯತೆಗಳನ್ನು ಪ್ರಸ್ತುತ ಪಡಿಸಲಾಯಿತು.
ಕಲಾಸ್ಪಂದನದ ಶಿಕ್ಷಕರಾದ ವಿದುಷಿ ಪವನಾ ಬಿ. ಆಚಾರ್ ಮತ್ತು ಡಾ. ಬಾಲಚಂದ್ರ ಆಚಾರ್ ಕಾರ್ಯಕ್ರಮ ಸಂಯೋಜಿಸಿ ನಿರ್ದೇಶಿಸಿದರು.
ಟ್ರಸ್ಟ್ನ ದೇವಕಿ ಕೆ. ಭಟ್, ಡಾ. ಅನಸೂಯಾದೇವಿ ಉಪಸ್ಥಿತರಿದ್ದರು. ಶಿಲ್ಪಾ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.