ಹುಬ್ಬಳ್ಳಿ: ನಗರದ ಕುಸುಗಲ್ ರಸ್ತೆಯಲ್ಲಿರುವ ಎಸ್ಎಸ್ ಶೆಟ್ಟರ್ ಫೌಂಡೇಷನ್ ನ ವೇದಾ ಇಂಟರ್ನ್ಯಾಷನಲ್ ಶಾಲೆಯಲ್ಲಿ 4ನೇ ವಾರ್ಷಿಕೋತ್ಸವ ವೇದಾಮೃತ ಶನಿವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು, ಮಕ್ಕಳಿಗೆ ಬಾಲ್ಯದಿಂದಲೇ ಸದ್ಗುಣಗಳನ್ನು ಕಲಿಸಿದರೆ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ವೇದ ಇಂಟರ್ ನ್ಯಾಷನಲ್ ಶಾಲೆಯು ಮಕ್ಕಳಿಗೆ ಕಲಿಕೆಯ ಜೊತೆ ಪ್ರಾಯೋಗಿಕವಾಗಿ ಸಂಸ್ಕೃತಿ, ಸಂಸ್ಕಾರ, ಸೇವಾ ಮನೋಭಾವವನ್ನು ತುಂಬುವಂತಹ ಕೆಲಸ ಮಾಡುತ್ತಿದೆ. ಪಾಲಕರು ಸಹ ತಮ್ಮ ಮಕ್ಕಳಿಗೆ ಹೆಚ್ಚಿನ ಸಮಯವನ್ನು ನೀಡಿ ಅವರಿಗೆ ಒಳ್ಳೆಯ ನೀತಿ ಪಾಠಗಳನ್ನು ಹೇಳಬೇಕು, ಕಲೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಎಸ್ಎಸ್ ಶೆಟ್ಟರ್ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್ ಮಾತನಾಡಿ, ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆ ಉತ್ತಮ ಮಾರ್ಗದರ್ಶನ ನೀಡುವುದು ಶಿಕ್ಷಕರು ಮತ್ತು ಪಾಲಕರ ಕರ್ತವ್ಯ. ಸಮಾಜದಲ್ಲಿ ಪ್ರಸ್ತುತ ವಿಷಯಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಬಹುಮುಖ್ಯ ಎಂದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಶಾಲೆಯ ಟ್ರಸ್ಟಿ ಶ್ರದ್ಧಾ ಸಂಕಲ್ಪ ಶೆಟ್ಟರ್, ಪ್ರಾಂಶುಪಾಲ ಬಿನಾ ಜಾನ್, ಆಡಳಿತ ಅಧಿಕಾರಿ ವಿಶಾಲ್ ಬಿಡ್ನಾಳ, ಸಂಯೋಜಕಿ ಶರಾವತಿ ತೊರ್ವಿ, ಶಿಕ್ಷಕರು, ಸಿಬ್ಬಂದಿ, ಮಕ್ಕಳು, ಪಾಲಕರು ಉಪಸ್ಥಿತರಿದ್ದರು.