

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ ಅನ್ಯಾಯ, ಅಸತ್ಯವನ್ನು ಸಹಿಸದೆ ನೊಂದವರ ಧ್ವನಿಯಾಗಿ ಬದುಕಿನ ಉದ್ದಕ್ಕೂ ಸಮಾಜಕ್ಕಾಗಿ ಜೀವನವನ್ನು ಮುಡುಪಾಗಿಟ್ಟ ರಾಜಕಾರಣಿ ವಸಂತ ಬಂಗೇರ. ಜಾತಿ, ಮತ, ಧರ್ಮ, ಶ್ರೀಮಂತ, ಬಡವ ಎನ್ನದೆ ಸೇವೆ ಮಾಡುತ್ತಿದ್ದರು.ಇವರ ನೆನಪಿನಲ್ಲಿ ಹುಟ್ಟುಹಬ್ಬದ ದಿನ ರಕ್ತದಾನ ಶಿಬಿರ ಏರ್ಪಡಿಸಿರುವುದು ನಿಜ ಅರ್ಥದಲ್ಲಿ ವಸಂತ ಬಂಗೇರರ ಬದುಕಿಗೆ ಮೌಲ್ಯ ತಂದಂತಾಗಿದೆ ಎಂದು ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಪೀಠದ ಮುಖ್ಯಸ್ಥ ಡಾ.ತುಕರಾಮ ಪೂಜಾರಿ ಹೇಳಿದರು. ಬುಧವಾರ ಬೆಳ್ತಂಗಡಿಯಲ್ಲಿ ಮಾಜಿ ಶಾಸಕ ಕೀರ್ತಿಶೇಷ ವಸಂತ ಬಂಗೇರರ 79ನೇ ಹುಟ್ಟುಹಬ್ವದ ಪ್ರಯುಕ್ತ ಕೆ.ವಸಂತ ಬಂಗೇರರ ಅಭಿಮಾನ ಬಳಗ ಸಮಿತಿ ವತಿಯಿಂದ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಬಂಗೇರರ ಸಾಧನೆ-ಬದುಕಿನ ಬಗ್ಗೆ ಉಪನ್ಯಾಸ ನೀಡಿದರು. ಸಮಿತಿಯ ಪ್ರದಾನ ಕಾರ್ಯದರ್ಶಿ ಮನೋಹರ್ ಕುಮಾರ್ ಇಳಂತಿಳ ಪ್ರಾಸ್ತಾವಿಕ ಮಾತನಾಡಿ, ರಾಜಕಾರಣದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಕಂಡವರು ವಸಂತ ಬಂಗೇರರು. ಅವರದ್ದೇ ಅದ ಅಭಿಮಾನ ಬಳಗವನ್ನು ಹೊಂದಿದ್ದ ಅವರು ಮಕ್ಕಳ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿದವರು. ಅವರ ಹುಟ್ಟುಹಬ್ಬದ ದಿನ ರಕ್ತದಾನ ಶಿಬಿರ ಆಯೋಜಿಸಲಾಗುತ್ತದೆ ಎಂದರು. ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜಯರಾಮ ಶೆಟ್ಟಿ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ವೆನ್ಲಾಕ್ ಆಸ್ಪತ್ರೆಯ ರಕ್ತಸಂಗ್ರಹಣಾ ವಿಭಾಗದ ಮುಖ್ಯಸ್ಥ ಆ್ಯಂಟನಿ ಡಿಸೋಜ, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್, ಜಿ.ಪಂ ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತ ಸಿ.ಆರ್.ನರೇಂದ್ರ ಉಪಸ್ಥಿತರಿದ್ದರು. ಬಂಗೇರ ಅಭಿಮಾನಿ ಬಳಗ ಸಮಿತಿ ಅಧ್ಯಕ್ಷ ಈಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಮನೋಹರ್ ಕುಮಾರ್ ಇಳಂತಿಲ ಸ್ವಾಗತಿಸಿ ವಂದಿಸಿದರು. ಪ್ರಜ್ಞಾ ಓಡಿಲ್ನಾಳ ನಿರೂಪಿಸಿದರು. 101 ಯನಿಟ್ ರಕ್ತ ಸಂಗ್ರಹಿಸಲಾಯಿತು.
ಧೀಮಂತ ರಾಜಕಾರಣಿ, ಮಹಾನ್ ಪುರುಷ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ವಸಂತ ಬಂಗೇರರು. ಭ್ರಷ್ಟಾಚಾರದ ಬಗ್ಗೆ ಉಗ್ರರೂಪವಾಗುತ್ತಿದ್ದ ಅವರಿಗೆ ಬಡವರ ಕಣ್ಣೀರು ಒರೆಸುವುದೆಂದರೆ ಅವರಿಗೆ ಪಂಚಪ್ರಾಣ. ಬೆಳ್ತಂಗಡಿ ತಾಲೂಕಿನ ಹೆಸರನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಐದು ಬಾರಿ ಶಾಸಕರಾಗಿದ್ದರೂ ಕೊನೆಯವರೆಗೂ ಸಾಲಗಾರರಾಗಿಯೇ ಇದ್ದರು. ಈಗಿನ ರಾಜಕಾರಣಿಗಳಿಗೆ ಅವರು ಅದರ್ಶ. ಜಯರಾಮ ಶೆಟ್ಟಿ, ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ