ಜಯನಗರದಲ್ಲಿ ಯುವದಸರಾ ಅಂಗವಾಗಿ ವಿವಿಧ ಕ್ರೀಡಾಕೂಟ;ಯುವಕ ಸಂಘ ಆಯೋಜನೆ

navara
Published on

ಬೆಂಗಳೂರು : ನವರಾತ್ರಿ ಹಬ್ಬವು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಆಧುನಿಕ ಜಗತ್ತಿನೊಂದಿಗೆ ಸಂಪರ್ಕಿಸುವ ಸೇತುವೆಯಾಗಿದ್ದು, ಸಂಸ್ಕೃತಿ, ಕಲೆ, ಕ್ರೀಡೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಜಯನಗರದಲ್ಲಿ ಯುವಕ ಸಂಘವು ಶನಿವಾರ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿತ್ತು.

ಅಂತರರಾಷ್ಟ್ರೀಯ ಕ್ರೀಡಾಪಟು ಮೋಹನ್ ಶಂಕರ್ ರೆಡ್ಡಿ ಕ್ರೀಡಾ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೋಹನ್ ಶಂಕರ್ ರೆಡ್ಡಿ, ಜೀವನದಲ್ಲಿ ನಾವು ಮಾಡಬೇಕಾದ ಸಾಧನೆಯ ಬಗ್ಗೆ ಪ್ರತಿಯೊಬ್ಬರಿಗೂ ಸ್ಪಷ್ಟತೆ ಇರಬೇಕು. ಸರಿಯಾದ ಗುರಿ ಇರಿಸಿಕೊಂಡು ಸಾಧನೆಯನ್ನು ಆರಂಭಿಸಬೇಕು. ಯಾವುದೇ ಕೌಶಲ ಅಥವಾ ಜ್ಞಾನವನ್ನು ಓದುವುದು, ನೋಡುವುದು ಅಥವಾ ಕೇಳುವ ಮೂಲಕ ಕಲಿಯಬಹುದು. ಆದರೆ ಪ್ರತಿಭೆ ಎಂಬುದು ನಮ್ಮೊಳಗಿನಿಂದಲೇ ಬೆಳೆಸಿಕೊಳ್ಳಬೇಕಾದ ವಿಷಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಶಿಕ್ಷಣ ಇಲಾಖೆಯ ಭಾಷಾ ಸಮಿತಿ ಆಡಳಿತ ಸಹಾಯಕ ರಿಜಿಸ್ಟ್ರಾರ್ ಜಯಪ್ರಕಾಶ್ ಸಿಂಗ್, ಯುವಕ ಸಂಘದ ಸಾಗರ್ ನಿದವಾಣಿ ಮತ್ತಿತರರು ಉಪಸ್ಥಿತರಿದ್ದರು.

ಕ್ರೀಡಾ ಸ್ಪರ್ಧೆಯಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ 100 ಮೀ, 200 ಮೀ, 400 ಮೀ, 800 ಮೀ ಮತ್ತು 1600 ಮೀ ಓಟ, ಉದ್ದ ಜಿಗಿತ, ಶಾಟ್‌ಪುಟ್; ಮತ್ತು ಜಾವೆಲಿನ್ ಥ್ರೋನಲ್ಲಿ ನಗರದ 50 ಕ್ಕೂ ಹೆಚ್ಚು ಶಾಲೆ ಮತ್ತು ಕಾಲೇಜುಗಳಿಂದ 270 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸೆ.21 ರಿಂದ ಆರಂಭವಾಗಿರುವ ಕಾರ್ಯಕ್ರಮವು ಅ.1ರವರೆಗೆ ನಡೆಯಲಿದ್ದು, ವಿವಿಧ ಕಲಾ ಪ್ರದರ್ಶನಗಳು, ದಸರಾ ಗೊಂಬೆಗಳ ಮೆರವಣಿಗೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net