

ಪುರುಷೋತ್ತಮ ಪೆರ್ಲ ಕಾಸರಗೋಡು
ಕಾಸರಗೋಡು ಜಿಲ್ಲೆಯಲ್ಲಿ ಮೀನು ಸಾಕಣೆ ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿ ಸಮಾನಾಂತರ ಅಭಿವೃದ್ಧಿ ನಡೆಯುತ್ತಿದ್ದು, ಉತ್ತರದಲ್ಲಿ ಮಂಜೇಶ್ವರ ಕಣ್ವತೀರ್ಥದಿಂದ ದಕ್ಷಿಣದಲ್ಲಿ ತಯ್ಯಲ್ ಕಡಪ್ಪುರದವರೆಗೆ 70 ಕಿ.ಮೀ. ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ವಿಪುಲ ಅವಕಾಶ ಲಭ್ಯವಾಗುತ್ತಿದೆ.
ಕಾಸರಗೋಡು ಜಿಲ್ಲೆಯಲ್ಲಿ ಒಳನಾಡಿನ ಮೀನುಗಾರಿಕಾ ಗ್ರಾಮ ಸೇರಿದಂತೆ 17 ಮೀನುಗಾರಿಕಾ ಗ್ರಾಮಗಳಿದ್ದು, 14,218 ಸಕ್ರಿಯ ಮೀನುಗಾರರು ಮತ್ತು 2,419 ಮೀನು ಸಂಬಂಧಿತ ಯೋಜನೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ 9 ವರ್ಷಗಳಲ್ಲಿ ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆ ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ಹಲವಾರು ಚಟುವಟಿಕೆ ಕೈಗೊಂಡಿದೆ. ಇದು ಒಳನಾಡಿನ ಸಾರ್ವಜನಿಕ ಜಲಮೂಲಗಳಲ್ಲಿ ಮೀನು ಸಂಪನ್ಮೂಲಗಳ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಈ ಮೂಲಕ ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನು ಅವಲಂಬಿಸಿರುವ ಮೀನುಗಾರರಿಗೆ ಹೆಚ್ಚಿನ ಪ್ರಯೋಜನ ಲಭಿಸಿದೆ.
ಮೀನು ಉತ್ಪಾದನೆ ಹೆಚ್ಚಿಸಲು, ಪಾಪ್ಯುಲರ್ ಫಿಶ್ ಫಾರ್ಮಿಂಗ್, ಪಿಎಂಎಂಎಸ್‌ವೈ ಮತ್ತು ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ಯೋಜನೆಗಳ ಮೂಲಕ ಪಡುತಕುಳಂನಲ್ಲಿ ಮೀನು ಸಾಕಣೆ, ಬಯೋಫ್ಲಾಕ್, ಅಲಂಕಾರಿಕ ಮೀನು ಸಾಕಣೆ, ಸಿಹಿನೀರಿನ ಕೊಳಗಳಲ್ಲಿ ಮೀನು ಸಾಕಣೆಯಂತಹ ಉಪಯೋಜನೆ ಜಾರಿಗೊಳಿಸಲಾಗುತ್ತಿದೆ.
ಕಲ್ಲುಚಿಪ್ಪು(ಪಚ್ಚಿಲೆ) ಕೃಷಿಗೆ ವಿಪುಲ ಅವಕಾಶ: ಕಾಸರಗೋಡು ಜಿಲ್ಲೆಯ ತ್ರಿಕರಿಪುರದಿಂದ ನೀಲೇಶ್ವರದವರೆಗೆ ವಿಸ್ತರಿಸಿರುವ ಕವ್ವಾಯಿ ಹಿನ್ನೀರು ಪ್ರದೇಶ ಮತ್ತು ಅದಕ್ಕೆ ಸಂಬಂಧಿಸಿದ ಜಲಮೂಲಗಳು ಉತ್ತರ ಕೇರಳದಲ್ಲಿ ಕಲ್ಲುಚಿಪ್ಪು ಕೃಷಿಯನ್ನು ಕೈಗೊಳ್ಳುವ ಪ್ರಮುಖ ಕೇಂದ್ರಗಳಾಗಿವೆ. ಅಕ್ಟೋಬರ್‌ನಿಂದ ಮೇವರೆಗೆ ಪ್ರತಿವರ್ಷ ಸಾವಿರಕ್ಕೂ ಹೆಚ್ಚು ರೈತರು ಈ ಭೂಮಿಯಲ್ಲಿ ಕಲ್ಲುಚಿಪ್ಪು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪ್ರದೇಶದ ಕೃಷಿಕರು ಗುಣಮಟ್ಟದ ಬೀಜ ಹೊಂದುವಲ್ಲಿ ಪಡುವ ಶೋಷಣೆ ತಡೆಗಟ್ಟಲು ಮತ್ತು ಕಲ್ಲುಚಿಪ್ಪು ಕೃಷಿಯನ್ನು ಉತ್ತೇಜಿಸಲು ಸ್ಥಳೀಯಾಡಳಿತ ಸಂಸ್ಥೆ ಪ್ರತ್ಯೇಕ ಪರಿಗಣನೆ ನೀಡುತ್ತಿದೆ. ಸುಸ್ಥಿರ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದ್ದು, ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ರೈತರಿಗೆ ಜಾಗೃತಿ ತರಗತಿಗಳನ್ನು ಆಯೋಜಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಸೊಸೈಟಿ ಮೂಲಕ ಬೀಜಗಳನ್ನು ವಿತರಿಸಲು ನಿರ್ಧರಿಸಲಾಗಿದ್ದು, 50 ಕೆ.ಜಿ. ಬೀಜದ ಚೀಲಕ್ಕೆ ಪ್ರತಿ ಕೆ.ಜಿ.ಗೆ 75 ರೂ. ನ್ಯಾಯಯುತ ಬೆಲೆ, 2.5 ರೂ. ಸೊಸೈಟಿ ನಿರ್ವಹಣಾ ಶುಲ್ಕ ಮತ್ತು ವಹಿವಾಟು ಶುಲ್ಕ ಸೇರಿದಂತೆ 50 ಕಿಲೋದ ಚೀಲಕ್ಕೆ 4,700 ರೂ. ನಿಗದಿಪಡಿಸಲಾಗಿದೆ. ಈ ಮೂಲಕ ಎಲ್ಲ ರೈತರಿಗೆ ನ್ಯಾಯಯುತ ಬೆಲೆಯಲ್ಲಿ ಬೀಜಗಳನ್ನು ಪಡೆಯಲು ಸಾಧ್ಯವಾಗುತ್ತಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಮಹಿಳೆಯರನ್ನು ಕೇಂದ್ರೀಕರಿಸಿ ಕೊಳದಲ್ಲಿ ಸಿಗಡಿ ಸಾಕಣೆಯನ್ವಯ ಮೂರು ಯೂನಿಟ್‌ಗಳು ಕಾರ್ಯಾಚರಿಸುತ್ತಿವೆ.
ಮೀನುಗಾರರ ಮಕ್ಕಳಿಗೆ ಶಾಲೆ
ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಮೀನುಗಾರರ ಹೆಣ್ಣು ಮಕ್ಕಳಿಗೆ ಆಧುನಿಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಾಞಂಗಾಡ್‌ನಲ್ಲಿ ಆರಂಭಿಸಲಾಗಿರುವ ಜಿಆರ್‌ಎಫ್‌ಟಿ ಪ್ರೌಢಶಾಲೆ ನಿರಂತರವಾಗಿ ಶೇ.100 ಫಲಿತಾಂಶ ದಾಖಲಿಸಿಕೊಂಡು ಬರುತ್ತಿದೆ. 2002ರಲ್ಲಿ ರಾಜ್ಯದ ಮೀನುಗಾರಿಕಾ ಇಲಾಖೆ ಅಧೀನದಲ್ಲಿ ಚಟುವಟಿಕೆ ನಡೆಸುತ್ತಿದ್ದು, 2015ರಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಪ್ರಸಕ್ತ ನ.8ರಿಂದ 10ವರೆಗೆ 62 ವಿದ್ಯಾರ್ಥಿಗಳು ವಾಸ್ತವ್ಯದೊಂದಿಗೆ ಅಧ್ಯಯನ ಮಾಡುತ್ತಿದ್ದಾರೆ. ಮೀನುಗಾರ ಕುಟುಂಬದ ವಿದ್ಯಾರ್ಥಿನಿಯರಿಗೆ ಲ್ಯಾಪ್‌ಟಾಪ್ ಮತ್ತು ಪೀಠೋಪಕರಣಗಳನ್ನು ಒದಗಿಸಲಾಗುತ್ತಿದೆ.
ಪುನರ್ವಸತಿ ಯೋಜನೆ
ಜಿಲ್ಲೆಯ ಕರಾವಳಿಯ 50 ಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಮೀನುಗಾರಿಕಾ ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ‘ಪುನರ್‌ಗೇಹಂ’ ಯೋಜನೆಯಡಿ ಆಸ್ತಿ ಮತ್ತು ಮನೆಗಳನ್ನು ಖರೀದಿಸಲು 140.74 ಕೋಟಿ ರೂ. ಮಂಜೂರು ಮಾಡಲಾಗಿದೆ. ಯೋಜನೆಯಲ್ಲಿ 344 ಮಂದಿ ಮೀನುಗಾರ ಫಲಾನುಭವಿಗಳಿದ್ದು, ಕೊಯಿಪ್ಪಾಡಿ ಕಡಪ್ಪುರದಲ್ಲಿ 144 ವಸತಿ ಸಮುಚ್ಚಯವುಳ್ಳ ಫ್ಲಾೃಟ್ ನಿರ್ಮಾಣ ಹಂತದಲ್ಲಿದೆ.
ಮೀನು ಸಾಕಣೆ ಮತ್ತು ಮೀನುಗಾರಿಕೆ ಕ್ಷೇತ್ರಗಳಲ್ಲಿ ಸಮಾನಾಂತರ ಅಭಿವೃದ್ಧಿ ಗುರಿಯೊಂದಿಗೆ ಜಿಲ್ಲೆಗಳಲ್ಲಿ ವಿವಿಧ ಯೋಜನೆಗಳನ್ನು ಆಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿ ಐದು ವರ್ಷಗಳ ಅವಧಿಯಲ್ಲಿ ಜನಪ್ರಿಯ ಮೀನು ಸಾಕಣೆ ಯೋಜನೆ ಮೂಲಕ 581.88 ಲಕ್ಷ ರೂ. ಮತ್ತು ಪಿಎಂಎಂಎಸ್‌ವೈ ಮೂಲಕ 382.16 ಲಕ್ಷ ರೂ. ಮೊತ್ತದ ಯೋಜನೆ ಜಾರಿಗೊಳಿಸಲಾಗಿದೆ. ಇದನ್ನು ಸಾಧಿಸುವ ಗುರಿಯೊಂದಿಗೆ ಜಿಲ್ಲೆಗಳಲ್ಲಿ ಜಾರಿಗೆ ತರಲಾಗುತ್ತಿರುವ ವಿವಿಧ ಯೋಜನೆಗಳ ಕಾರ್ಯಕ್ಷಮತೆಯಲ್ಲಿ ಕಾಸರಗೋಡು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಕೆ.ಎ.ಲಬೀಬ್, ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ ಕಾಸರಗೋಡು ಜಿಲ್ಲೆ