ವರ್ಷವಿಡೀ ವೈವಿಧ್ಯಮಯ ಕಾರ್ಯಕ್ರಮ : ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಮಾಹಿತಿ

New Project (22)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಕಳೆದ ನೂರು ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜ್ಞಾನದಾಸೋಹದ ಮೂಲಕ ಸಾವಿರಾರು ಮಂದಿ ಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸಿ ಸಮಾಜಕ್ಕೆ ಅರ್ಪಿಸಿದ ಉಜಿರೆಯ ಎಸ್.ಡಿ.ಎಂ. ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆಯ ಅಂಗವಾಗಿ ವಷರ್ವಿಡೀ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ಹೇಳಿದರು. ಅವರು ಗುರುವಾರ ಉಜಿರೆಯಲ್ಲಿ ಎಸ್.ಡಿ.ಎಂ. ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಊರಿನ ನಾಗರಿಕರು ಸಮಾರಂಭಕ್ಕೆ ಸಕ್ರಿಯ ಸಹಕಾರ ನೀಡಬೇಕು ಎಂದರು. ಇದೇ ಸಂದರ್ಭದಲ್ಲಿ ಶತಮಾನೋತ್ಸವ ಲಾಂಛನ ಅನಾವರಣಗೊಳಿಸಿದರು. ಶಾಲೆಯ ಹಳೇ ವಿದ್ಯಾರ್ಥಿ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಮಾತನಾಡಿ, ತಮ್ಮ ಪ್ರಾಥಮಿಕ ಶಾಲಾದಿನಗಳ ಸಿಹಿ-ಕಹಿ ಅನುಭವಗಳನ್ನು ಸ್ಮರಿಸಿಕೊಂಡು, ಪ್ರಾಥಮಿಕ ಶಾಲಾ ಶಿಕ್ಷಕರು ನೀಡಿದ ಮಾರ್ಗದರ್ಶನ, ಕಲಿಸಿದ ಶಿಸ್ತು, ಸಂಸ್ಕಾರ ತಮ್ಮ ಬದುಕಿಗೆ ದಾರಿದೀಪವಾಗಿದೆ. ದೇವಪ್ಪ ಗೌಡ ಮೇಸ್ಟ್ರು ಕಲಿಸಿದ ನಾಟಕದ ಅಭಿನಯ, ಕಮಲಾ ಟೀಚರ್ ಹೇಳಿಕೊಟ್ಟ ಸಂಸ್ಕಾರ, ತರಗತಿಯಲ್ಲಿ ಮಕ್ಕಳ ತುಂಟಾಟಕ್ಕೆ ನೀಡಿದ ಬೆತ್ತದ ಪೆಟ್ಟು, ಹುಡುಗಿಯರ ಮಧ್ಯೆ ತಪ್ಪು ಮಾಡಿದ ಹುಡುಗರನ್ನು ಕುಳಿತುಕೊಳ್ಳಿಸಿದ ಪ್ರಕರಣವನ್ನು ಸ್ಮರಿಸಿಕೊಂಡರು. ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಮಾತನಾಡಿ, ಧರ್ಮಸ್ಥಳದಿಂದ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಿಗೆ ನೀಡುತ್ತಿರುವ ಸಹಕಾರ, ಪ್ರೋತ್ಸಾಹವನ್ನು ಕೃತಜ್ಞತೆಯಿಂದ ಸ್ಮರಿಸಿದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ನಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಷರ್ವಿಡೀ ತಿಂಗಳಿಗೊಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಶತಮಾನೋತ್ಸವ ಸಮಿತಿಯ ಪ್ರಧಾನಕಾರ್ಯದರ್ಶಿ ಅಬೂಬಕ್ಕರ್ ಸ್ವಾಗತಿಸಿ, ಶಾಲಾ ಮುಖ್ಯಶಿಕ್ಷಕ ಬಾಲಕೃಷ್ಣ ನಾಯ್ಕ ವಂದಿಸಿದರು. ನಿವೃತ್ತ ಮುಖ್ಯಶಿಕ್ಷಕ ಬಿ.ಸೋಮಶೇಖರ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net