ಬನಾರಸಿ ಬಾಳೆಹಣ್ಣಿನ ರುಚಿ ಸವಿಯಲಿದ್ದಾರೆ ದುಬೈ ಮಂದಿ; ಮೊಟ್ಟಮೊದಲ ಬಾರಿಗೆ 3,500 ಕೆಜಿ ತೂಕದ ಸರಕು ರಫ್ತು, ನೆಲ್ಲಿಕಾಯಿಗೂ ಬೇಡಿಕೆ

dubai
Published on

ಉತ್ತರ ಪ್ರದೇಶ: ಗಾಜಿಪುರದಲ್ಲಿರುವ ಜಮ್ನಿಯಾದ ರೈತರು ಉತ್ಪಾದಿಸಿದ ಬಾಳೆ, ಬಾಳೆ ಎಲೆಗಳು ಮತ್ತು ಅದರ ಹೂವುಗಳನ್ನು ಮೊದಲ ಬಾರಿಗೆ ಸೋಮವಾರ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಕಳುಹಿಸಲಾಯಿತು. 3500 ಕೆಜಿ ತೂಕದ ಈ ಸರಕುಗಳನ್ನು ಏರ್ ಇಂಡಿಯಾ ವಿಮಾನದ ಮೂಲಕ ಶಾರ್ಜಾಕ್ಕೆ ಕಳುಹಿಸಲಾಗಿದೆ.

ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (APEDA) ಅಧ್ಯಕ್ಷ ಅಭಿಷೇಕ್ ದೇವ್ ಅವರು ಈ ಕಾರ್ಯಕ್ಕೆ ಹಸಿರು ನಿಶಾನೆ ತೋರಿದರು. ಇದಲ್ಲದೇ ಬನಾರಸಿ ನೆಲ್ಲಿಕಾಯಿ ಕೂಡ ಕಳುಹಿಸಲಾಗಿದೆ.

ಎಪಿಇಡಿಎ ಡೆಪ್ಯುಟಿ ಜನರಲ್ ಮ್ಯಾನೇಜರ್ ಸಿ.ಬಿ.ಸಿಂಗ್ ಮಾತನಾಡಿ, ಗಲ್ಫ್ ರಾಷ್ಟ್ರಗಳಲ್ಲಿ ಹಣ್ಣು, ತರಕಾರಿಗಳಲ್ಲದೆ ಬಾಳೆ ಎಲೆಗಳಿಗೂ ಬೇಡಿಕೆ ಇದೆ. ಹಣ್ಣುಗಳು ಮತ್ತು ತರಕಾರಿಗಳ ರಫ್ತು ನಿರಂತರವಾಗಿ ಹೆಚ್ಚುತ್ತಿದೆ. ಆಗಸ್ಟ್ ತಿಂಗಳೊಂದರಲ್ಲೇ 91 ಮೆಟ್ರಿಕ್ ಟನ್ ರಫ್ತು ಮಾಡಲಾಗಿದೆ. ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ವರ್ಷ ಶೇ.248 ರಷ್ಟು ಏರಿಕೆಯಾಗಿದೆ. ಆಹಾರ ಮತ್ತು ತರಕಾರಿ ರಫ್ತಿಗೆ ಇಂಟಿಗ್ರೇಟೆಡ್ ಪ್ಯಾಕ್ ಹೌಸ್ ನಿರ್ಮಾಣದೊಂದಿಗೆ, ರಫ್ತು ಮತ್ತಷ್ಟು ಬೆಳವಣಿಗೆಯ ಸಾಧ್ಯತೆ ಹೆಚ್ಚಿದೆ ಎಂದರು.

ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆ
ಪೂರ್ವಾಂಚಲದ ಎಫ್‌ಪಿಒಗಳ ಸಹಾಯದಿಂದ, ಅಂತರರಾಷ್ಟ್ರೀಯ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ತರಕಾರಿಗಳು ಮತ್ತು ಹಣ್ಣುಗಳ ಉತ್ಪಾದನೆಯನ್ನು ಪ್ರಾರಂಭಿಸಲಾಗಿದೆ. ಇದರ ಪರಿಣಾಮವಾಗಿ ಪೂರ್ವಾಂಚಲ್‌ನ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಲಾರಂಭಿಸಿತು.

2022-23 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ 2023-24 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ರಫ್ತುಗಳಲ್ಲಿ ಶೇ.248 ರಷ್ಟು ಹೆಚ್ಚಳವಾಗಿದೆ. 2021-22 ನೇ ಹಣಕಾಸು ವರ್ಷದಲ್ಲಿ 157 ಟನ್ ತರಕಾರಿಗಳು ಮತ್ತು ಹಣ್ಣುಗಳನ್ನು ರಫ್ತು ಮಾಡಲಾಗಿದೆ ಮತ್ತು 2022-23 ರ ಹಣಕಾಸು ವರ್ಷದಲ್ಲಿ 561 ಟನ್ ತರಕಾರಿಗಳು ಮತ್ತು ಹಣ್ಣುಗಳನ್ನು ರಫ್ತು ಮಾಡಲಾಗಿದೆ.

ಸೋರೆಕಾಯಿ-ಹಲಸು
ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) 2020 ರಲ್ಲಿ ವಾರಣಾಸಿಯಲ್ಲಿ ಕಚೇರಿಯನ್ನು ತೆರೆಯುವ ಮೂಲಕ ರಾಜ್ಯ ಸರ್ಕಾರದ ಸಹಾಯದಿಂದ ರಫ್ತು ಹೆಚ್ಚಿಸಿದೆ. ಕೋವಿಡ್​​ ಅವಧಿಯಲ್ಲಿ ಏಪ್ರಿಲ್ 2020 ರಲ್ಲಿ ಎಪಿಇಡಿಎ ಮೊದಲ ಬಾರಿಗೆ ಬ್ರಿಟನ್‌ಗೆ ಹಸಿರು ಮೆಣಸಿನಕಾಯಿಯನ್ನು ಕಳುಹಿಸಿತ್ತು.

ಹಸಿರು ಮೆಣಸಿನಕಾಯಿ, ಬೆಂಡೆಕಾಯಿ, ಹಸಿರು ಬಟಾಣಿ, ಮಾವು, ಲಿಚಿ, ಬಾಳೆಹಣ್ಣು, ಕುಂದ್ರು, ಪೇರಲ, ಮಾವು, ಅರುವಿ, ಡೊಂಕು, ಸೋರೆಕಾಯಿ, ಹಲಸು, ಬದನೆ, ಆಮ್ಲಾ, ನುಗ್ಗೆಕಾಯಿ, ಕಲ್ಲಂಗಡಿಯನ್ನು ಮುಖ್ಯವಾಗಿ ಗಲ್ಫ್ ದೇಶಗಳು, ಯುರೋಪ್, ನೇಪಾಳ, ಬಾಂಗ್ಲಾದೇಶದಂತಹ ದೇಶಗಳಿಗೆ ವಾರಣಾಸಿಯಿಂದ ರಫ್ತು ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net