

ಧಾರವಾಡ: ಇಂದು ಧಾರವಾಡ ಹಾಗೂ ಬೆಂಗಳೂರಿನ ನಡುವೆ ಸಂಚರಿಸಲಿರುವ ಒಟ್ಟು 5 ವಂದೇ ಭಾರತ್ ಎಕ್ಸಪ್ರೆಸ್ ರೈಲುಗಳಿಗೆ ಇಂದು ಪ್ರಧಾನಿ ಮೋದಿ ಭೋಪಾಲ್ ನಿಂದ ವರ್ಚುವಲ್ ಆಗಿ ಚಾಲನೆ ನೀಡಿದ್ದಾರೆ. ವಂದೇ ಭಾರತ್ ರೈಲು ನಾನಾ ಕಾರಣಗಳಿಗಾಗಿ ಸದ್ದು ಮಾಡುತ್ತಿದ್ದು ತಂತ್ರಜ್ಞಾನದ ದೃಷ್ಟಿಯಲ್ಲೂ ಉನ್ನತ ಗುಣಮಟ್ಟದ ವಿದ್ಯುತ್ ರೈಲು ಇದಾಗಿರಲಿದೆ.
ಪ್ರಧಾನಿಮೋದಿ ವಂದೇ ಭಾರತ್ ರೈಲಿಗೆ ವರ್ಚ್ಯುವಲ್ ಆಗಿ ಚಾಲನೆ ನೀಡಿದರು. ಧಾರವಾಡದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದ್ದಾರೆ. ಚಾಲನೆ ಸಿಕ್ಕ ನಂತರ ಬೆಂಗಳೂರಿಗೆ ತನ್ನ ಮೊದಲ ಪ್ರಯಾಣದ ಭಾಗವಾಗಿ ರೈಲು ಹೊರಟಿದೆ.
ಧಾರವಾಡದಲ್ಲಿ ನಡೆದ ವಂದೇ ಭಾರತ ರೈಲಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲರ ಥಾವರಚಂದ್ ಗೆಹ್ಲೋಟ್ “ರೈಲಿನ ಆಧುನಿಕತೆಯಲ್ಲಿ ಭಾರತ ರೈಲ್ವೆ ಈಗ ಮುಂದೆ ಇದೆ. ದೇಶವನ್ನು ಒಂದೇ ಸೂತ್ರದಡಿ ಜೋಡಿಸುವ ಕೆಲಸ ಭಾರತದ ರೈಲ್ವೆ ಮಾಡುತ್ತಿದೆ. ಭಾರತದ ಐಕ್ಯತೆಗೆ ರೈಲ್ವೆ ಕೊಡುಗೆ ಅಪಾರವಾಗಿದೆ.
ಕರ್ನಾಟಕ ರಾಜ್ಯಕ್ಕೆ ರೈಲ್ವೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆ. ಕರ್ನಾಟಕದ ಎರಡನೇ ವಂದೇ ಭಾರತ ಶುಭಾರಂಭ ಆಗುತ್ತಿದೆ. ಉತ್ತರ ಮತ್ತು ದಕ್ಷಿಣ ಕರ್ನಾಟಕ ಜೋಡಿಸುವ ರೈಲು ಇದಾಗಿರಲಿದೆ.
ವಂದೇ ಭಾರತ ರೈಲು ರಾಷ್ಟ್ರೀಯ ಗೌರವದ ಪ್ರತೀಕವಾಗಿದ್ದು ಮೇಕ್ ಇನ್ ಇಂಡಿಯಾದ ವಚನವನ್ನು ಈಡೇರಿಸಿದ್ದಕ್ಕೆ ಇದು ಉದಾಹರಣೆ. ಕರ್ನಾಟಕದಲ್ಲಿಯೂ ರೈಲ್ವೆ ವಿಕಾಸದಲ್ಲಿ ಬೆಳವಣಿಗೆ ಆಗುತ್ತಿದೆ. ದೇಶದಲ್ಲಿ ಸಂಪರ್ಕ ಬೆಳೆಸುವಲ್ಲಿ ಕೇಂದ್ರ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ.” ಎಂದು ಮಾತನಾಡಿದರು.
ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರೈಲು ಧಾರವಾಡದಿಂದಲೇ ಯಾಕೆ ಹೊರಡುವುದು ಎನ್ನುವುದರ ಕುರಿತಾಗಿ ಮಾತನಾಡಿದರು. ಈ ಸಂದರ್ಭ ಅವರು “ಇದೊಂದು ಐತಿಹಾಸಿಕ ದಿನವಾಗಿದೆ. ಧಾರವಾಡ ರೈಲ್ವೇ ನಿಲ್ದಾಣ ಲೋಕಾರ್ಪಣೆಗೊಳಿಸುವ ಸಂದರ್ಭ ರೈಲ್ವೇ ಸಚಿವ ಅಶ್ವಿನಿವೈಷ್ಣವ್ ಅವರಿಗೆ ಮನವಿ ಮಾಡಲಾಗಿತ್ತು. ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದೆ. ಅದರಂತೆ ಆ ಮನವಿಗೆ ಸ್ಪಂದಿಸಿ ಇಂದು ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲಿಗೆ ಚಾಲನೆ ದೊರೆಯುತ್ತಿದೆ
ಇಂದು ಧಾರವಾಡದಿಂದ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು ಆರಂಭವಾಗುತ್ತಿದೆ. ಇದರ ಜೊತೆಗೆ ಧಾರವಾಡದಿಂದಲೇ ಈ ರೈಲು ಸಂಚಾರ ಆರಂಭವಾಗಬೇಕು ಎಂಬ ಬೇಡಿಕೆ ಇದೆ. ಬೆಳಿಗ್ಗೆ ಧಾರವಾಡದಿಂದ ಈ ರೈಲು ಸಂಚಾರ ನಡೆಸಬೇಕು ಎಂಬ ಬೇಡಿಕೆ ಇದೆ. ಸಧ್ಯ ಹುಬ್ಬಳ್ಳಿಯಿಂದ ಈ ರೈಲಿನ ಮೆಂಟೇನನ್ಸ್ ಮಾಡಲು ವ್ಯವಸ್ಥೆ ಇಲ್ಲ. ಹೀಗಾಗಿ ಆರೇಳು ತಿಂಗಳ ಅವಧಿಯಲ್ಲಿ ಈ ರೈಲಿನ ಸಂಚಾರ ಬೆಂಗಳೂರು ಬದಲಾಗಿ ಧಾರವಾಡದಿಂದ ಆರಂಭಿಸಲಾಗುವುದು. ಇದು ಸ್ವದೇಶಿ ನಿರ್ಮಿತ ಹಾಗೂ ಆತ್ಮನಿರ್ಭರ ಭಾರತದ ರೈಲು
ಈ ಮೊದಲು ವಿದ್ಯುತ್ ಚಾಲಿತ ರೈಲು ಇರಲಿಲ್ಲ. ಈಗ ದೇಶದಾದ್ಯಂತ ವಿದ್ಯುತ್ ಚಾಲಿತ ರೈಲುಗಳ ವ್ಯವಸ್ಥೆ ಕಲ್ಪಿಸಲಾಗಿದೆ. ದೇಶದ ನೇತೃತ್ವವನ್ನ ವಹಿಸಿರುವ ವ್ಯಕ್ತಿ ಟೆಕ್ನಿಕಲ್ ಹಾಗೂ ಇಂಜಿನೀಯರಿಂಗ್ ಸ್ಟಾರ್ಟ ಅಪ್ ಗಳಿಗೆ ಪ್ರೋತ್ಸಾಹ ನೀಡಿದ ಫಲವೇ ವಂದೇ ಭಾರತ ರೈಲು. ಮುಂಬರುವ ದಿನಗಳಲ್ಲಿ ದೇಶದಾದ್ಯಂತ 400 ವಂದೇ ಭಾರತ್ ರೈಲು ಚಾಲನೆಯ ಗುರಿ ಇದೆ. ಬಹಳಷ್ಟು ಜನರದ್ದು ಬೆಳಗಾವಿಯಿಂದ ರೈಲು ಆರಂಭಿಸುವಂತೆ ಬೇಡಿಕೆ ಇದೆ. ಮುಂಬರುವ ದಿನಗಳಲ್ಲಿ ಅಲ್ಲಿಯೂ ಡಬ್ಬಲಿಂಗ್ ವ್ಯವಸ್ಥೆ ಕಲ್ಪಿಸಿ ರೈಲ್ವೇ ಸಂಚಾರ ಪ್ರಾರಂಭಿಸಲಾಗುವುದು.
ನರೇಂದ್ರ ಮೋದಿ ಸರ್ಕಾರ ಕರ್ನಾಟಕ ಹಾಗೂ ಹುಬ್ಬಳ್ಳಿ ಧಾರವಾಡದ ಅಭುವೃದ್ದಿಗೆ ಬದ್ಧವಾಗಿದೆ, ಈ ವಂದೇ ಭಾರತ್ ರೈಲಿನ ಸದುಪಯೋಗ ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ರೈಲಿನ ಸ್ಪೀಡ್ ಇನ್ನೂ ಹೆಚ್ಚು ಮಾಡಲು ಪ್ರಯತ್ನಿಸಲಾಗುವುದು” ಎಂದು ಹೇಳಿದರು.