ರಾಜ್ಯದಲ್ಲೂ ವಂದೇಭಾರತ್; ನ.11ರಂದು ಮೋದಿ ಅವರಿಂದ ಚಾಲನೆ

Express
Published on

ಬೆಂಗಳೂರು: ರಾಜ್ಯದಲ್ಲಿ ವಂದೇಭಾರತ್ ರೈಲು ಸಂಚಾರಕ್ಕೆ ಚಾಲನೆ ಸೇರಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಹಿನ್ನೆಲೆಯಲ್ಲಿ ನ.11ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪಿಎಂಒ ಕಚೇರಿಯಿಂದ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಪಿಎಂಒ ಕಚೇರಿ ಸಿಬ್ಬಂದಿ ಜತೆಗೆ ಖುದ್ದು ಪ್ರಧಾನಿಯವರೇ ಪಾಲ್ಗೊಂಡು ರಾಜ್ಯ ಸರ್ಕಾರಕ್ಕೆ ವಿವಿಧ ಸಲಹೆ ಸೂಚನೆ ನೀಡಿದ್ದು ವಿಶೇಷವಾಗಿತ್ತು. ಯಾವುದೇ ಕಾರಣಕ್ಕೂ ಕಾರ್ಯಕ್ರಮದಿಂದ ಜನರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ಸ್ಪಷ್ಟ ನುಡಿಗಳಲ್ಲಿ ರಾಜ್ಯ ಸರ್ಕಾರಕ್ಕೆ ತಿಳಿಸಿದರು.

ಸಭಾ ಕಾರ್ಯಕ್ರಮದಲ್ಲಿ ಹೆಚ್ಚು ಜನ ಸೇರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿ ಇತರೆ ಪ್ರಯಾಣಿಕರಿಗೆ ಸಮಸ್ಯೆ ಆಗಬಾರದು. ಈ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ವಹಿಸಬೇಕೆಂದು ಮುಖ್ಯಮಂತ್ರಿಯವರಿಗೇ ಸೂಚನೆ ನೀಡಿದರು. ಇನ್ನು ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖರೊಂದಿಗೆ ಸಭೆ ನಡೆಸುವುದನ್ನು ಈ ಭೇಟಿ ವೇಳೆ ಸೇರಿಸುವುದು ಬೇಡ. ಪ್ರತ್ಯೇಕ ಸಭೆ ನಡೆಸಿದರಾಯಿತು, ಐಟಿ ಸಮಾವೇಶಕ್ಕೆ ಸಂದೇಶ ಕಳಿಸುವುದಾಗಿ ಪ್ರಧಾನಿ ಸರ್ಕಾರಕ್ಕೆ ತಿಳಿಸಿದರು.

ಎಚ್​ಎಎಲ್​ನಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ರಸ್ತೆ ಮಾರ್ಗದಲ್ಲಿ ಸಂಚರಿಸುವುದರಿಂದ ರಸ್ತೆಯಲ್ಲಿ ಹಾಗೂ ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಭದ್ರತಾ ವ್ಯವಸ್ಥೆಯಿಂದ ಉಂಟಾಗಬಹುದಾದ ಸವಾಲುಗಳ ಬಗ್ಗೆ ಪ್ರಧಾನಿಯವರು ಚಿಂತೆ ವ್ಯಕ್ತಪಡಿಸಿದರೆಂದು ಗೊತ್ತಾಗಿದೆ. ಆದರೆ, ರೈಲು ನಿಲ್ದಾಣಕ್ಕೆ ಬರುವ ಅಗತ್ಯತೆಯನ್ನು ರಾಜ್ಯ ಸರ್ಕಾರ ಪ್ರತಿಪಾದಿಸಿದೆ. ಜತೆಗೆ ಜನರಿಗೆ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿತೆನ್ನಲಾಗಿದೆ. ಈ ಸಭೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಸವರಾಜ ಬೊಮ್ಮಾಯಿ, ದಕ್ಷಿಣ ಭಾರತದಲ್ಲಿ ಮೊದಲ ಹಾಗೂ ಭಾರತದ ಐದನೇ ವಂದೇ ಭಾರತ ಎಕ್ಸ್​ಪ್ರೆಸ್​ಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ವಿುನಲ್, 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ ಅನಾವರಣ ಮಾಡಲಿದ್ದಾರೆ. ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಬೃಹತ್ ಸಭೆ ಆಯೋಜಿಸಲಾಗಿದೆ ಎಂದು ಹೇಳಿದರು.

ಮುಂದೆ ಬೆಂಗಳೂರಿಂದ ಹುಬ್ಬಳ್ಳಿಗೆ

ವಂದೇ ಭಾರತ್ ರೈಲು ಮೊದಲಿಗೆ ಮೈಸೂರು- ಬೆಂಗಳೂರು- ಚೆನ್ನೈ ಮಾರ್ಗದಲ್ಲಿ ಸಂಚರಿಸಲಿದ್ದು, ಬಳಿಕ ಮುಂದೆ ಯಾವ ಮಾರ್ಗದಲ್ಲಿ ಸಂಚರಿಸಬೇಕೆಂಬ ಬಗ್ಗೆ ಪ್ರಸ್ತಾವನೆಗಳು ಸಿದ್ಧವಾಗುತ್ತಿವೆ. ನೈಋತ್ಯ ರೈಲ್ವೆ ಅಧಿಕಾರಿಗಳ ಪ್ರಕಾರ 2023ರಲ್ಲಿ ಬೆಂಗಳೂರು-ಹುಬ್ಬಳ್ಳಿ ನಡುವೆ ಸೇವೆ ಆರಂಭಿಸುವ ಉದ್ದೇಶವಿದೆ. ಬಳಿಕ ಬೆಂಗಳೂರು- ಕೊಯಮತ್ತೂರು ಮತ್ತು ಬೆಂಗಳೂರು- ಸಿಕಂದರಾಬಾದ್ ಕಾರಿಡಾರ್​ಗಳನ್ನು ಗುರುತಿಸಲಾಗಿದೆ. ಈ ಮಾರ್ಗಗಳಲ್ಲಿ ಸೆಮಿ ಸ್ಪೀಡ್ ರೈಲು ಆರಂಭಿಸಲು ಅಗತ್ಯವಾದ ಮಾರ್ಗವನ್ನು ಭದ್ರಪಡಿಸುವ ಕೆಲಸ ಭರದಿಂದ ಸಾಗುತ್ತಿದೆ ಎಂದಿದ್ದಾರೆ.

ಶೀಘ್ರವೇ ವೇಳಾಪಟ್ಟಿ ಬಿಡುಗಡೆ

ಮೈಸೂರು- ಬೆಂಗಳೂರು-ಚೆನ್ನೈ ನಡುವೆ ಸಂಚರಿ ಸುವ ಹೊಸ ರೈಲಿನ ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಸಿದ್ಧಪಡಿಸಿದೆ. ರೈಲು ನಿಲುಗಡೆ, ಪ್ರಯಾಣ ದರ ಎಲ್ಲವನ್ನೂ ಅಂತಿಮ ಗೊಳಿಸಿದ್ದು ಅಧಿಕೃತ ಪ್ರಕಟಣೆ ಇಷ್ಟರಲ್ಲೇ ಹೊರಬೀಳಲಿದೆ. ನ.11ರಂದು ಸಾಂಕೇತಿಕವಾಗಿ ಉದ್ಘಾಟನೆ ಯಾಗಲಿದ್ದು, ಬಳಿಕ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ.

ಅವಧಿ ಕಡಿತ

ಬೆಂಗಳೂರು ಮತ್ತು ಚೆನ್ನೈ ನಡುವೆ ಶತಾಬ್ದಿ ಎಕ್ಸ್​ಪ್ರೆಸ್ ಈ ಮಾರ್ಗದಲ್ಲಿ ಅತ್ಯಂತ ವೇಗದಲ್ಲಿ ಸಂಚರಿಸುವ ರೈಲಾಗಿದ್ದು, ಇದು 359 ಕಿ.ಮೀ ದೂರವನ್ನು ಸರಾಸರಿ 72 ಕಿಮೀ ವೇಗದಲ್ಲಿ ಸರಿಸುಮಾರು ಐದು ಗಂಟೆಗಳಲ್ಲಿ ಕ್ರಮಿಸುತ್ತದೆ. ಮೈಸೂರು- ಚೆನ್ನೈ ನಡುವೆ ಒಟ್ಟಾರೆ 7 ತಾಸಿಗೂ ಅಧಿಕ ಸಮಯ ಬೇಕಾಗುತ್ತಿದೆ. ವಂದೇ ಭಾರತ್ ಈ ಸಮಯವನ್ನು 6 ಗಂಟೆಗೆ ತಗ್ಗಿಸಲಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಶತಾಬ್ದಿ ರೈಲುಗಳು ತೆಗೆದುಕೊಳ್ಳುವ ಸಮಯದಲ್ಲಿ ಶೇ.25ರಿಂದ 40-45 ಸಮಯ ಕಡಿಮೆ ಸಮಯದಲ್ಲಿ ವಂದೇ ಭಾರತ್ ಸಂಚರಿಸಲಿದೆ. ಮುಂದಿನ ದಿನಗಳಲ್ಲಿ ಈ ಮಾರ್ಗದಲ್ಲಿ ಎಷ್ಟು ಸಮಯ ಕಡಿಮೆ ಆಗಬಹುದು ಎಂಬುದು ಸ್ಪಷ್ಟವಾಗಲಿದೆ. ಮೈಸೂರು-ಬೆಂಗಳೂರು-ಚೆನ್ನೈ ನಡುವಿನ ಮೊದಲ ವಂದೇ ಭಾರತ್ ರೈಲು ಸಂಚಾರಕ್ಕೆ ಅಗತ್ಯ ತಯಾರಿಯನ್ನು ನಡೆಸಲಾಗಿದೆ ಎಂದು ವಿವರಿಸಿದ್ದಾರೆ. ಈ ರೈಲಿಗೆ ಬೇಕಾದ ಟ್ರ್ಯಾಕ್​ನ್ನು ಬಲಪಡಿಸಲಾಗಿದೆ. ಸಿಗ್ನಲ್ ವ್ಯವಸ್ಥೆ ಕೂಡ ಸಿದ್ಧವಾಗಿವೆ. ವೇಗದ ನಿರ್ಬಂಧ ತೆಗೆದು ಹಾಕುವ ಸಂಬಂಧ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಮಾರ್ಗದಲ್ಲಿ ರೈಲು 130 ಕಿ.ಮೀ ಅಥವಾ ಅದಕ್ಕಿಂತ ಹೆಚ್ಚು ವೇಗದಲ್ಲಿ ಚಲಿಸುತ್ತದೆಯೇ ಎಂದು ಖಚಿತಪಡಿಸಿಕೊಳ್ಳಲಾಗುತ್ತಿದೆ. ಸ್ಯಾಟಲೈಟ್ ಮತ್ತು ಲೆವಲ್ ಕ್ರಾಸಿಂಗ್​ಗಳಿದ್ದಲ್ಲಿ ವೇಗದ ನಿರ್ಬಂಧ, ಸಿಗ್ನಲ್ ಮತ್ತು ಬ್ಯಾರಿಕೇಡ್ ವಿಷಯದಲ್ಲಿ ಸುರಕ್ಷಾ ಕ್ರಮಗಳ ಬಗ್ಗೆ ಪರಿವೀಕ್ಷಣೆ ನಡೆಸಲಾಗಿದೆ.

ರೈಲಿನ ವಿಶೇಷ
  • ವಂದೇ ಭಾರತ್ ರೈಲು ಪ್ರಯಾಣಿಕರಿಗೆ ವಿಮಾನ ಪ್ರಯಾಣದ ಮಾದರಿ ಅನುಭವ ಸಿಗಲಿದೆ.
  • ದೇಶೀಯವಾಗಿ ನಿರ್ವಣವಾಗಿರುವ ಈ ರೈಲು ಅಪಘಾತ ನಿರೋಧಕ ವ್ಯವಸ್ಥೆ ಹೊಂದಿವೆ.
  • ಪ್ರತಿ ಗಂಟೆಗೆ 160-180 ಕಿಮೀ ಗರಿಷ್ಠ ಕಾರ್ಯಾಚರಣೆಯ ವೇಗಕ್ಕಾಗಿ ಬೇಕಾದ ವ್ಯವಸ್ಥೆ ಇದೆ.
  • ಸುಧಾರಿತ ಅತ್ಯಾಧುನಿಕ ಸಸ್ಪೆನ್ಷನ್ ವ್ಯವಸ್ಥೆಯು ಸುಗಮ, ಸುರಕ್ಷಿತ ಸವಾರಿ ಅನುಭವ ನೀಡಲಿದೆ.
  • ಪ್ರತಿ ಕೋಚ್ ನಲ್ಲಿ 32 ಇಂಚಿನ ಸ್ಕ್ರೀನ್ ಅಳವಡಿಸಲಾಗಿದ್ದು, ಪ್ರಯಾಣಿಕರ ಮಾಹಿತಿ ಸಿಗಲಿದೆ.
  • ದಿವ್ಯಾಂಗ ಸ್ನೇಹಿ ವಾಶ್​ರೂಮ್ ಬ್ರೈಲ್​ ಅಕ್ಷರಗಳಲ್ಲಿ ಸೀಟ್ ಸಂಖ್ಯೆಯ ಸೀಟ್ ಹ್ಯಾಂಡಲ್ ಇವೆ.
  • ಸ್ಥಳೀಯವಾಗಿ ಅಭಿವೃದ್ಧಿ ಪಡಿಸಲಾದ ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆ ಹೊಂದಿದೆ.
ಪ್ರಧಾನಿ ಭೇಟಿ ವೇಳಾಪಟ್ಟಿ
  • ನ.11ರಂದು ಬೆಳಗ್ಗೆ 10 ಗಂಟೆಗೆ ಎಚ್​ಎಎಲ್ ವಿಮಾನ ನಿಲ್ದಾಣಕ್ಕೆ ಆಗಮನ.
  • ಹೆಲಿಕ್ಯಾಪ್ಟರ್ ಮೂಲಕ ಕೆಎಸ್​ಆರ್ ರೈಲು ನಿಲ್ದಾಣಕ್ಕೆ ಆಗಮನ, ವಂದೇ ಭಾರತ್ ಉದ್ಘಾಟನೆ
  • 11.30ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ವಿುನಲ್-2 ಉದ್ಘಾಟನೆ
  • 12 ಗಂಟೆಗೆ ನಾಡಪ್ರಭು ಕೆಂಪೇಗೌಡರ 108 ಅಡಿ ಪ್ರತಿಮೆ ಉದ್ಘಾಟನೆ
  • 12.30ಕ್ಕೆ ಸಾರ್ವಜನಿಕ ಸಭೆಯಲ್ಲಿ ಉಪಸ್ಥಿತಿ, 2 ಗಂಟೆಗೆ ಚೆನ್ನೈಗೆ ಪ್ರಯಾಣ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net