vamana review: ತಾಯಿ ಸೆಂಟಿಮೆಂಟ್ ಕಥೆಯಲ್ಲಿ ಆ್ಯಕ್ಷನ್ ಅಬ್ಬರ

vamana 11
Published on

ಚಿತ್ರ: ವಾಮನ

ನಿರ್ದೇಶನ: ಶಂಕರ್ ರಮಣ್

ತಾರಾಗಣ: ಧನವೀರ್ ಗೌಡ, ರೀಷ್ಮಾ ನಾಣಯ್ಯ, ಸಂಪತ್ ರಾಜ್, ತಾರಾ ಅನುರಾಧ, ಆದಿತ್ಯ ಮೆನನ್, ಅವಿನಾಶ್, ಅಚ್ಯುತ್ ಕುಮಾರ್ ಮತ್ತಿತರರು

ಶಿವ ಸ್ಥಾವರಮಠ

ನಾಯಕ ನಟನನ್ನು ಸುತ್ತುವರಿದ ರೌಡಿಗಳು, ಏನು ನಿನ್ನ ಹೆಸರು ಎಂದು ಕೇಳುತ್ತಾರೆ. ಅದಕ್ಕೆ ಆತ ‘ನನ್ನಲ್ಲಿ ಏನಿಲ್ಲವೋ ಅದೇ ನನ್ನ ಹೆಸರು- ಗುಣ’. ಅಷ್ಟಕ್ಕೂ ಗುಣನ (ಧನವೀರ್) ಸ್ವಭಾವ ಹಾಗೂ ಗುರಿಗಳೇ ವಿಚಿತ್ರ. ಆತನಲ್ಲಿ ಒಬ್ಬ ರಕ್ಷಕನಿದ್ದಾನೆ, ಜತೆಗೆ ರಾಕ್ಷಸನೂ ಇದ್ದಾನೆ. ನಿಜವಾದ ಪ್ರೇಮಿ, ತಾಯಿಗೆ ತಕ್ಕ ಮಗನೂ ಇದ್ದಾನೆ. ಇವೆಲ್ಲ ಇದ್ದರೂ ಆತನ ಗುರಿ ಮಾತ್ರ ತಂದೆ ಪಾಪಣ್ಣ (ಸಂಪತ್ ರಾಜ್). ತಂದೆ ಕಟ್ಟಿದ ಸಾಮ್ರಾಜ್ಯವನ್ನು ಹೇಳಲು ಹೆಸರಿಲ್ಲದಂತೆ ಮಾಡುವುದೇ ಆತನ ದೊಡ್ಡ ಗುರಿ. ಅಷ್ಟಕ್ಕೂ ತಂದೆಯೇ ಯಾಕೆ ಗುಣನ ಟಾರ್ಗೆಟ್? ಇಬ್ಬರ ನಡುವೆ ದ್ವೇಷ ಮೂಡಲು ಕಾರಣವೇನು? ಗುಣ ‘ವಾಮನ’ ಹೇಗಾಗುತ್ತಾನೆ? ತಿಳಿಯಲು ‘ವಾಮನ’ ಚಿತ್ರ ನೋಡಬೇಕಷ್ಟೇ.

ನಿರ್ದೇಶಕ ಶಂಕರ್ ರಮಣ್, ನಟ ಧನವೀರ್‌ಗೆ ಒಪ್ಪುವಂತಹ ಪಕ್ಕಾ ಕಮರ್ಷಿಯಲ್ ಕಥೆಯನ್ನೇ ಬರೆದಿದ್ದಾರೆ. ಇನ್ನಷ್ಟು ಪರಿಣಾಮಕಾರಿಯಾಗಿ ನಿರೂಪಿಸಬಹುದಿತ್ತು. ಇಡೀ ಸಿನಿಮಾ ಮಾಸ್ ಆ್ಯಕ್ಷನ್‌ನಲ್ಲಿಯೇ ಸಾಗುತ್ತದೆ. ನಡು ನಡುವೆ ಪ್ರೀತಿ, ಸ್ನೇಹ, ತಾಯಿ ಸೆಂಟಿಮೆಂಟ್ ಅಂಶಗಳನ್ನು ತೋರಿಸಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಜೋಡಿಸುವ ಮಧ್ಯೆ, ಕಥೆಗೆ ಇನ್ನಷ್ಟು ಒತ್ತು ನೀಡಿದ್ದರೆ ಮತ್ತಷ್ಟು ಆಪ್ತವಾಗುತ್ತಿತ್ತು. ಮೊದಲರ್ಧ ಆ್ಯಕ್ಷನ್ ಅಬ್ಬರ ಹಾಗೂ ಮಾಸ್ ಡೈಲಾಗ್‌ಗಳಿವೆ. ದ್ವಿತೀಯಾರ್ಧದಲ್ಲಿ ನಿಜವಾದ ಕಥೆ ತೆರೆದುಕೊಳ್ಳುತ್ತದೆ. ತಾಯಿ ಎಮೋಷನ್ ಜತೆಗೆ ಕಥೆಗೆ ಟ್ವಿಸ್ಟ್ ನೀಡಿದ್ದಾರೆ. ಆದರೆ, ಇಡೀ ಕಥೆಯ ಸಾರ ತಿಳಿಯಬೇಕಾದರೆ ಕೊನೆಯವರೆಗೆ ಸಿನಿಮಾ ನೋಡಬೇಕಾದ ತಾಳ್ಮೆ ಬೇಡುತ್ತದೆ.

‘ವಾಮನ’ದಲ್ಲಿ ನಟ ಧನವೀರ್ ಪಕ್ಕಾ ಮಾಸ್ ಅವತಾರ ತಾಳಿದ್ದಾರೆ. ಸಾಹಸ ದೃಶ್ಯಗಳಲ್ಲಿ ಗಮನ ಸೆಳೆಯುತ್ತಾರೆ. ‘ಮುದ್ದು ರಾಕ್ಷಸಿ’ ರೀಷ್ಮಾ ನಾಣಯ್ಯ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಜತೆಗೆ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ತಾಯಿ ಪಾತ್ರದಲ್ಲಿ ತಾರಾ ಭಾವನಾತ್ಮಕವಾಗಿ ನಟಿಸಿದ್ದಾರೆ. ಸಂಪತ್ ರಾಜ್, ಆದಿತ್ಯ ಮೆನನ್, ಕಾಕ್ರೋಚ್ ಸುಧಿ, ಪೆಟ್ರೋಲ್ ಪ್ರಸನ್ನ ಪಾತ್ರಗಳು ಇಷ್ಟವಾಗುತ್ತವೆ. ಮಹೆನ್ ಸಿಂಹ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತದಲ್ಲಿ ‘ವಾಮನ’ನ ಆ್ಯಕ್ಷನ್ ದೃಶ್ಯಗಳು ತೆರೆಯ ಮೇಲೆ ಅದ್ದೂರಿಯಾಗಿ ಕಾಣುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net