ಕೇರಳದ ಅಭಿವೃದ್ಧಿ ದೇಶಕ್ಕೆ ಮಾದರಿ : ಮಾಧವನ್ ಮಣಿಯರ ಬಣ್ಣನೆ

New Project (9)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಕಳೆದ ಒಂದು ದಶಕದಲ್ಲಿ ಕೇರಳ ಅಭಿವೃದ್ಧಿ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆ ಇತರ ರಾಜ್ಯಗಳಿಗೆ ಮಾದರಿ ಎಂದು ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯರ ಹೇಳಿದರು.

ಸರ್ಕಾರಿ ಮೀನುಗಾರಿಕಾ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ವಲಿಯಪರಂಬ ಗ್ರಾಮ ಪಂಚಾಯಿತಿ ಅಭಿವೃದ್ಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ವಲಿಯಪರಂಬ ಪಂಚಾಯಿತಿ ಕೃಷಿಕರು ಮತ್ತು ಮೀನುಗಾರರ ಪ್ರದೇಶವಾಗಿರುವುದರಿಂದ, ಅವರ ಕಲ್ಯಾಣ ಮತ್ತು ರಕ್ಷಣೆಗಾಗಿ ಪಂಚಾಯಿತಿ ಜಾರಿಗೆ ತಂದಿರುವ ಯೋಜನೆಗಳು ಗಮನಾರ್ಹ. 2018 ಮತ್ತು 2019ರ ಪ್ರವಾಹ ಕಾಲಾವಧಿಯಲ್ಲಿ ಮತ್ತು ನಂತರದ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, ರಾಜ್ಯ ಸರ್ಕಾರ ಜನರ ಕಲ್ಯಾಣಕ್ಕಾಗಿ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಿದ್ದು, ಈ ಸಂದರ್ಭ ಹಸಿರುಕ್ರಿಯಾ ಸೇನೆಯ ಕಾರ್ಯ ಶ್ಲಾನೀಯ ಎಂದು ತಿಳಿಸಿದರು.

ವಲಿಯಪರಂಬ ಗ್ರಾಪಂ ಅಧ್ಯಕ್ಷ ವಿ.ವಿ.ಸಜೀವನ್ ಅಧ್ಯಕ್ಷತೆ ವಹಿಸಿದ್ದರು. ನವ ಕೇರಳ ಮಿಷನ್ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್, ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಜೆ.ಸಜಿತ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಖಾದರ್ ಪಾಂಡ್ಯಾಳ, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಇ.ಕೆ.ಮಲ್ಲಿಕಾ, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಮನೋಹರನ್, ಯೋಜನಾ ಸಮಿತಿ ಉಪಾಧ್ಯಕ್ಷ ವಿ.ಕೆ.ಕರುಣಾಕರನ್, ಪಂಚಾಯಿತಿ ಸದಸ್ಯರಾದ ವಿ.ಮಧು, ಕೆ.ಅಜಿತಾ, ಪಿ.ಕೆ. ಸುಮತಿ, ಸಿಡಿಎಸ್ ಅಧ್ಯಕ್ಷೆ ಇ.ಕೆ.ಬಿಂದು, ಪಂಚಾಯಿತಿ ಕಾರ್ಯದರ್ಶಿ ಕೆ.ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.

ಉಪಾಧ್ಯಕ್ಷೆ ಪಿ. ಶ್ಯಾಮಲಾ ಸ್ವಾಗತಿಸಿದರು. ಸಹಾಯಕ ಕಾರ್ಯದರ್ಶಿ ಸುರೇಶ್ ಅರಿಯಿಲ್ ವಂದಿಸಿದರು.

ದಾಖಲೆ ಬಿಡುಗಡೆ

ಅಭಿವೃದ್ಧಿ ದಾಖಲೆಯನ್ನು ಬಿಡುಗಡೆ ಮಾಡಲಾಯಿತು. ರಾಜ್ಯದ ಅತ್ಯುತ್ತಮ ಪಡಿತರ ಅಂಗಡಿ ಪರವಾನಗಿದಾರರಿಗಿರುವ ಪ್ರಶಸ್ತಿಯನ್ನು ಆಡಳಿತ ಮಂಡಳಿ ಸದಸ್ಯ ವಿ.ಮಧು ಹಾಗೂ ಸಾಮಾಜಿಕ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ಖಲೀಫಾ ಉದಿನೂರ್ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net