

ಕಾರ್ಕಳ: ಎಲ್ಲ ಖಾಸಗಿ ಬಸ್‌ಗಳಲ್ಲಿಯೂ ವ್ಯಾಕ್ಸುಂ ಡೋರ್ ಅಳವಡಿಸುವ ಬಗ್ಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಕೆನರಾ ಬಸ್ ಮಾಲೀಕರ ಸಂಘ ಉಪಾಧ್ಯಕ್ಷ ಜೀವಂಧರ ಅತಿಕಾರಿ ಅಜೆಕಾರು ಹೇಳಿದರು.
ಕಾರ್ಕಳ-ಬೆಳ್ಮಣ್-ಪಡುಬಿದ್ರಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಅವೈಜ್ಞಾನಿಕ ಉಬ್ಬು ತಗ್ಗು ನಿರ್ಮಿಸಿರುವ ಕಾರಣ ಬ್ರೇಕ್ ಹಾಕಿದ್ದ ಸಂದರ್ಭ ಫುಟ್‌ಬೋರ್ಡ್‌ನಲ್ಲಿದ್ದ ವಿದ್ಯಾರ್ಥಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತಪಟ್ಟ ವಿದ್ಯಾರ್ಥಿಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡಲು ಚಿಂತನೆ ನಡೆಸಲಾಗಿದೆ. ಪಡುಬಿದ್ರಿ-ಬೆಳ್ಮಣ್-ಕಾರ್ಕಳ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ವೈಜ್ಞಾನಿಕವಾಗಿ ಉಬ್ಬು ತಗ್ಗು ನಿರ್ಮಿಸಬೇಕು, ಇಲ್ಲವೇ ತೆಗೆಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಬೇಡಿಕೆಯಿಟ್ಟರು.
ಬಸ್‌ನಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿರುವ ಸಂದರ್ಭ ಸಮಯಪಾಲಕರು ಸಹಕಾರ ನೀಡಬೇಕು. ಸಾರಿಗೆ ವ್ಯವಸ್ಥೆಯಲ್ಲಿ ಅಪಘಾತ ರಹಿತ ಸೇವೆಯೊಂದಿಗೆ ಪ್ರಯಾಣಿಕರೊಂದಿಗೆ ಪ್ರತಿಯೊಬ್ಬ ಚಾಲಕ, ನಿರ್ವಾಹಕ ಸೌಜನ್ಯದಿಂದ ವರ್ತಿಸುವಂತೆ ನಿರ್ದೇಶನ ನೀಡುತ್ತೇವೆ. ಸಮವಸ್ತ್ರ ಧರಿಸಿ ಬಸ್ ಚಾಲಕರು ಹಾಗೂ ಬಸ್ ನಿರ್ವಾಹಕರು ಕಾರ್ಯನಿರ್ವಹಿಸಬೇಕು ಎಂದರು. ಬಸ್ ಮಾಲೀಕ ಹಾಗೂ ಕಾರ್ಕಳ ರೋಟರಿ ಅಧ್ಯಕ್ಷ ಇಕ್ಬಾಲ್, ಬಸ್ ಮಾಲೀಕ ಗೋಪಿನಾಥ್ ಭಟ್, ಅತುಲ್ ಅಡ್ಯಂತಾಯ ಮತ್ತಿತರರು ಉಪಸ್ಥಿತರಿದ್ದರು.