

ಉತ್ತರಾಖಂಡ: ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಡೆಹರಾಡೋನ್‌ನ ಗಾಂಧಿ ಪಾರ್ಕ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹುತಾತ್ಮ ಯೋಧರ ಕುಟುಂಬಗಳಿಗೆ ನಾಲ್ಕು ಹೊಸ ಯೋಜನೆಗಳನ್ನು ಘೋಷಣೆ ಮಾಡಿದರು. ಶಹೀದ್ ಸ್ಮಾರಕದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಹುತಾತ್ಮ ಯೋಧರಿಗೆ ನೀಡುತ್ತಿರುವ ಎಕ್ಸೃ್ ಗ್ರೇಷಿಯಾ ಅನುದಾನವನ್ನು ಈ ಹಿಂದೆ ಇದ್ದ 10 ಲಕ್ಷದಿಂದ 50 ಲಕ್ಷಕ್ಕೆ ಏರಿಕೆ, ಹುತಾತ್ಮ ಯೋಧರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು 2 ವರ್ಷದಿಂದ 5 ವರ್ಷಕ್ಕೆ ವಿಸ್ತರಣೆ, ಹುತಾತ್ಮರ ಅವಲಂಬಿತರಿಗೆ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಗ್ರೂಪ್ ’ಸಿ’ ಮತ್ತು ಗ್ರೂಪ್ ’ಡಿ’ ಹೊರತುಪಡಿಸಿ ಇತರೆ ಇಲಾಖೆಗಳಲ್ಲೂ ನೇಮಕಾತಿ ನೀಡುವುದು ಹಾಗೂ ಸೈನಿಕ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಇತರೆ ಕಾರ್ಮಿಕರಂತೆ ರಜೆ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಧಾಮಿ ನೀಡಿದರು.
ಕಾರ್ಗಿಲ್ ಯುದ್ಧದ ಸಮಯದಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿ ಹುತಾತ್ಮರ ಅಂತಿಮ ಸಂಸ್ಕಾರವನ್ನು ಅವರ ಸ್ವಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ವ್ಯವಸ್ಥೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದಿಂದ ಇಂದು ಭಾರತೀಯ ಸೇನೆಯು ಮೊದಲಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿದೆ. ಉತ್ತರಾಖಂಡ ಸರ್ಕಾರವು ಡೆಹ್ರಾಡೂನ್‌ನ ಗುನಿಯಾಲ್‌ಗಾಂವ್‌ನಲ್ಲಿ ರಾಜ್ಯದ ಹುತಾತ್ಮರ ಸ್ಮರಣಾರ್ಥ ಅತ್ಯಾಧುನಿಕ ‘ಶೌರ್ಯಸ್ಥಳ ನಿರ್ಮಿಸುತ್ತಿದ್ದು, ರಾಜ್ಯದ ಎಲ್ಲಾ 75 ಹುತಾತ್ಮರ ಹೆಸರುಗಳನ್ನು ಅಲ್ಲಿ ಹಾಕಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸೈನಿಕ ಕಲ್ಯಾಣ ಸಚಿವ ಗಣೇಶ ಜೋಶಿ, ಸಚಿವರಾದ ಪ್ರೇಮಚಂದ್ ಅಗರ್ವಾಲ್, ಶಾಸಕರಾದ ಸವಿತಾ ಕಪೂರ್, ಬ್ರಿಜ್ ಭೂಷಣ್ ಗೈರೋಲಾ ಮತ್ತು ನಿರ್ಗಮಿತ ಮೇಯರ್ ಸುನಿಲ್ ಉನಿಯಾಲ್ ಗಾಮಾ ಮತ್ತಿತರರು ಕಾರ್ಗಿಲ್ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.