

ಲಖನೌ: ಒಂದು ಮಗು ಬೆಳೆದು ದೊಡ್ಡದಾಗುವವರೆಗೂ ಪಾಲಕರು ಎಷ್ಟು ಎಚ್ಚರಿಕೆ ವಹಿಸುತ್ತಾರೋ ಅಷ್ಟೇ ಎಚ್ಚರಿಕೆಯನ್ನು ರೈತ ತನ್ನ ಬೆಳೆಯ ಮೇಲೆ ಇಟ್ಟಿರುತ್ತಾನೆ. ಜೀವನಕ್ಕೆ ಆಧಾರವಾದ ಬೆಳೆಯನ್ನು ಉಳಿಸಿಕೊಳ್ಳಲು ಎದುರಾಗುವ ಎಲ್ಲ ಅಡೆ-ತಡೆಗಳನ್ನು ರೈತ ಹೇಗೆ ಎದುರಿಸುತ್ತಾನೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ನಿದರ್ಶನವಾಗಿದೆ.
ಉತ್ತರ ಪ್ರದೇಶ ಲಖಿಂಪುರ್ ಖೇರಿ ಜಿಲ್ಲೆಯ ಜಹಾನ್ ನಗರ ಗ್ರಾಮದ ಯುವ ರೈತನೊಬ್ಬ ತನ್ನ ಕಬ್ಬಿನ ಬೆಳೆಯನ್ನು ಕೋತಿಗಳ ಹಾವಳಿಯಿಂದ ಕಾಪಾಡಿಕೊಳ್ಳಲು ಕರಡಿ ವೇಷ ಧರಿಸಿ ಜಮೀನಿನಲ್ಲಿ ನಿತ್ಯವು ಕುಳಿತುಕೊಳ್ಳುತ್ತಿದ್ದಾನೆ. ಇದು ಓರ್ವ ರೈತನ ಪಾಡಲ್ಲ. ಬದಲಾಗಿ ಅಲ್ಲಿನ ಎಲ್ಲ ರೈತರು ಇದೇ ವಿಧಾನವನ್ನು ಅನುಸರಿಸುತ್ತಿದ್ದಾರೆ.
ಆ ಏರಿಯಾದಲ್ಲಿ ಸುಮಾರು 40 ರಿಂದ 45 ಕೋತಿಗಳು ನಿತ್ಯವು ಅಲೆದಾಡುತ್ತಾ ಬೆಳೆಗಳನ್ನು ನಾಶ ಮಾಡುತ್ತಿವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೊಬ್ಬರು ಕೂಡ ಈ ಕಡೆ ಗಮನ ಹರಿಸುತ್ತಿಲ್ಲ. ಆದ್ದರಿಂದ ನಾವು ಹಣವನ್ನು ಹೊಂದಿಸಿಕೊಂಡು 4 ಸಾವಿರ ರೂಪಾಯಿಗೆ ಕರಡಿ ವೇಷದ ದಿರಿಸನ್ನು ಖರೀದಿಸಿದ್ದೇವೆ. ಈ ಮೂಲಕ ನಮ್ಮ ಬೆಳೆಗಳನ್ನು ನಾವೇ ಕಾಪಾಡಿಕೊಳ್ಳುತ್ತಿದ್ದೇವೆ ಎಂದು ಗಜೇಂದ್ರ ಸಿಂಗ್ ಎಂಬ ರೈತ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಲಖೀಂಪುರ್ ಖೇರಿ ವಲಯ ಅರಣ್ಯಾಧಿಕಾರಿ ಸಂಜಯ್ ಬೈಸ್ವಾಲ್, ಬೆಳೆಗಳಿಗೆ ಹಾನಿ ಮಾಡುತ್ತಿರುವ ಕೋತಿಗಳನ್ನು ತಡೆಯಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ. (ಏಜೆನ್ಸೀಸ್)