ಗಂಗಾ ನದಿಯಲ್ಲಿ ಕೊಚ್ಚಿ ಹೋದ ಅಧಿಕಾರಿ..ರಕ್ಷಿಸಲು 10ಸಾವಿರ ಹಣ ಕೇಳಿದ ಈಜುಗಾರರು!

hand (1)
Published on

ಲಖನೌ: ದೇಶದ ನಾನಾ ಕಡೆ ಕುಂಭದ್ರೋಣ ಮಳೆ ಸುರಿಯುತ್ತಿದ್ದು, ಇದಕ್ಕೆ ಉತ್ತರ ಪ್ರದೇಶವೂ ಹೊರತಲ್ಲ. ಇಲ್ಲಿ ಗಂಗಾನದಿ ಉಕ್ಕಿ ಹರಿಯುತ್ತಿದೆ. ಆ ರಾಜ್ಯದ ಆರೋಗ್ಯ ಇಲಾಖೆ ಉಪನಿರ್ದೇಶಕರೊಬ್ಬರು ನದಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾರೆ. ಆದರೆ ಅವರ ಸ್ನೇಹಿತರು ಅಲ್ಲಿದ್ದ ಈಜುಗಾರರನ್ನು ರಕ್ಷಿಸುವಂತೆ ಕೇಳಿದಾಗ ಅವರು 10ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡುತ್ತೇವೆ ಎಂದು ಹೇಳಿದರೂ ಕೇಳಲಿಲ್ಲ. ಹಣ ಇಲ್ಲದ ಕಾರಣ ಆನ್‌ಲೈನ್‌ನಲ್ಲಿ ಕಳುಹಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಅವರು ಆನ್‌ಲೈನ್‌ನಲ್ಲಿ ಹಣವನ್ನು ಕಳುಹಿಸಿ, ಅದು ಅವರ ಬ್ಯಾಂಕ್​ ಖಾತೆಗೆ ತಲುಪುವಷ್ಟರ ಹೊತ್ತಿಗೆ ಅಧಿಕಾರಿ ಗಂಗೆ ಪಾಲಾಗಿದ್ದಾರೆ.

ಆರೋಗ್ಯ ಇಲಾಖೆಯ ಉಪನಿರ್ದೇಶಕ ಆದಿತ್ಯ ವರ್ತನ್ ಸಿಂಗ್ ಶನಿವಾರ ಬಿಲಹೌರ್‌ನ ನನ್ಮೌ ಘಾಟ್‌ನಲ್ಲಿ ಸೂರ್ಯನಿಗೆ ಪೂಜೆ ಸಲ್ಲಿಸಿದ ನಂತರ ನದಿಯಲ್ಲಿ ಪವಿತ್ರ ಸ್ನಾನಕ್ಕೆಂದು ನದಿಯ ಆಳಕ್ಕೆ ಹೋಗಿದ್ದಾರೆ. ಅವರಿಗೆ ಈಜು ಬರುತ್ತಿದ್ದರೂ ದಿಢೀರನೆ ಪ್ರವಾಹ ಬಂದಿದ್ದರಿಂದ ನೀರು ಎಳೆದುಕೊಂಡು ಮುಂದಕ್ಕೆ ಸಾಗಿದೆ.

ಆಗ ಅಲ್ಲೇ ಇದ್ದ ಅವರ ಸ್ನೇಹಿತರು ಈಜುಗಾರರ ಬಳಿ ಹೋಗಿ ವಿಷಯ ತಿಳಿಸಿದ್ದಾರೆ. ತಮ್ಮ ಸ್ನೇಹಿತ ಆದಿತ್ಯನನ್ನು ಉಳಿಸುವಂತೆ ಕೇಳಿಕೊಂಡಿದ್ದಾರೆ. ಆಗ ಈಜುಗಾರರು ಈ ಕೂಡಲೇ 10 ಸಾವಿರ ರೂ. ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅವರ ಬಳಿ ಹಣವಿಲ್ಲದ ಕಾರಣ, ಯುಪಿಐ ಪಾವತಿ ಮಾಡಿದ್ದಾರೆ. ಆದರೆ ಅಷ್ಟುಹೊತ್ತಿಗೆ ಆದಿತ್ಯ ನೀರಿನಲ್ಲಿ ಬಹುದೂರ ಸಾಗಿದ್ದು, ಈಜುಗಾರರು ಅವರನ್ನು ಹುಡುಕಿ ಮೇಲೆ ತರಲು ಸಾಧ್ಯವಾಗಿಲ್ಲ.

ಬಳಿಕ ಪೊಲೀಸರು, ಈಜುಗಾರರು ಬಂದು ಆದಿತ್ಯ ರನ್ನು ಹುಡುಕಿದರೂ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಈಜುಗಾರರು ಸಕಾಲದಲ್ಲಿ ಸ್ಪಂದಿಸಿ ರಕ್ಷಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net