Uttar Pradesh | ಸಮಾಧಿಯ ಹೊರಗೆ ತಲೆ ಕತ್ತರಿಸಿದ ಮೌಲ್ವಿಯ ಶವ ಪತ್ತೆ; ಮಾಟ, ಮಂತ್ರ ಶಂಕೆ

dead body at up
Published on

ನವದೆಹಲಿ: ಉತ್ತರ ಪ್ರದೇಶದ ಬಿಜ್ನೋರ್‌ನಿಂದ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಸ್ಮಶಾನದಲ್ಲಿ ಸಮಾಧಿ ಮಾಡಲಾಗಿದ್ದ ಮೌಲ್ವಿಯೊಬ್ಬರ ಶವವನ್ನು ಸಮಾಧಿಯಿಂದ ಹೊರತೆಗೆದು ಆತನ ತಲೆಯನ್ನು ಕತ್ತರಿಸಲಾಗಿದೆ. ಈ ವಿಷಯ ತಿಳಿದ ತಕ್ಷಣ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಮಶಾನದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಹಲ್ದೌರ್ ಪೊಲೀಸ್ ಠಾಣೆ ವ್ಯಾಪ್ತಿಯ ಖಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗ್ರಾಮದ ಯುವಕನೊಬ್ಬ ಸ್ಮಶಾನದತ್ತ ಹೋಗುತ್ತಿದ್ದಾಗ ಸ್ಮಶಾನದಲ್ಲಿದ್ದ ಸಮಾಧಿಯೊಂದರ ಮಣ್ಣನ್ನು ಅಗೆದಿರುವುದು ಕಂಡು ಬಂದಿದೆ. ಹತ್ತಿರ ಹೋಗಿ ನೋಡಿದಾಗ ಶವ ಸಮಾಧಿಯ ಹೊರಭಾಗದಲ್ಲಿದ್ದು ತಲೆ ಕಾಣೆಯಾಗಿತ್ತು. ಬಳಿಕ ಯುವಕರು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಮಶಾನದಲ್ಲಿ ಜನ ಜಮಾಯಿಸಿದ್ದರು.

ಈ ಘಟನೆ ಕುರಿತು ಮಾಹಿತಿ ಪಡೆದ ಅಧಿಕಾರಿ ಸಂಗ್ರಾಮ್ ಸಿಂಗ್, ಪೊಲೀಸ್ ಪಡೆಗಳೊಂದಿಗೆ ಸ್ಥಳಕ್ಕೆ ಆಗಮಿಸಿದರು. ಅಗೆದ ಸಮಾಧಿ ಮೌಲ್ವಿಯಾದ ಕಾರಿ ಸೈಫುರ್ರಹ್ಮಾನ್ ಅವರದು ಎನ್ನಲಾಗಿದೆ. ಅವರು 25 ಜುಲೈ 2024 ರಂದು ನಿಧನರಾಗಿದ್ದರು. ಇದೀಗ ಅವರ ಮೃತದೇಹವನ್ನು ಸಮಾಧಿಯಿಂದ ತೆಗೆದು, ಮೃತದೇಹದ ಕುತ್ತಿಗೆಯನ್ನು ಕತ್ತರಿಸಲಾಗಿದೆ. ಯಾರೋ ಮಾಟಕ್ಕಾಗಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಶವದ ಎದೆಯ ಮೇಲೆ ಗಡ್ಡದ ಕೂದಲು ಇಡಲಾಗಿತ್ತು. ಅಲ್ಲಿ ಬಾಳೆ ಎಲೆಯಲ್ಲಿ ಸುತ್ತಿದ ಸೋರೆಕಾಯಿ ಪತ್ತೆಯಾಗಿದೆ. ಅಲ್ಲಿ ಸುಗಂಧ ದ್ರವ್ಯದ ಬಾಟಲಿ, ಮಾಂಸ ಮತ್ತು ಪ್ರಾಣಿಗಳ ಮುಳ್ಳಗಳು ಕೂಡ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡು ತನಿಖೆಗೆ ಕಳುಹಿಸಿದ್ದಾರೆ.

ಎಸ್ಪಿ ಹೇಳಿದ್ದೇನು?

ಪ್ರಕರಣ ತನಿಖೆಗೆ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ವಾಜಪೇಯಿ ತಿಳಿಸಿದ್ದಾರೆ. ಈ ಕೃತ್ಯ ಎಸೆಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೆ, ಸ್ಮಶಾನದ ಬಳಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಖಾರಿ ಸೈಫುರ್ ಹರ್ಮಾನ್ ಅವರ ಪುತ್ರ ಫೈಜಾನ್ ಹಲ್ದೌರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net