ಓದಿದ್ದು ನೆನಪಾಗುತ್ತಿಲ್ಲವೇ? - ಒಂದೆಲಗ ಬಳಸಿ ನೋಡಿ..

Ondelaga 4 March 20
Published on

ವಿಶೇಷ ಔಷಧೀಯ ಗಿಡಮೂಲಿಕೆಗಳಲ್ಲೊಂದು ಒಂದೆಲಗ. ಹೆಸರೇ ಸೂಚಿಸುವಂತೆ ಇದು ಒಂದೇ ಎಲೆಯನ್ನು ಹೊಂದಿರುವ ಸಸ್ಯ. ಇದಕ್ಕೆ ಬ್ರಾಹ್ಮಿ ಎಂದೂ ಕರೆಯುತ್ತಾರೆ. ನೆಲವನ್ನೇ ಅಂಟಿಕೊಂಡು ಬಳ್ಳಿಯಂತೆ ಬೆಳೆಯುವ ಒಂದೆಲಗವು ಜೌಗುಪ್ರದೇಶಗ ಮತ್ತು ಗದ್ದೆ, ತೋಟಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಇದರ ವೈಜ್ಞಾನಿಕ ಹೆಸರು ಸೆಂಟೆಲ ಏಷಿಯಾಟಿಕ.

ಎಲ್ಲ ಭಾಗಗಳಲ್ಲೂ ಔಷಧೀಯ ಗುಣಗಳನ್ನು ಹೊಂದಿರುವ ಇದನ್ನು ಆಹಾರವಾಗಿಯೂ ಬಳಸುತ್ತಾರೆ. ಜ್ಞಾಪಕಶಕ್ತಿಗೆ ಸಂಬಂಧಪಟ್ಟ ಜೀವಕೋಶಗಳಿಗೆ ಪುನಶ್ಚೇತನ ನೀಡುವ ಬೈಕೊಸೈಡ್ ಎ ಮತ್ತು ಬಿ ಎಂಬ ರಾಸಾಯನಿಕ ಇದರಲ್ಲಿರುವುದರಿಂದ ಇದು ಜ್ಞಾಪಕ ಶಕ್ತಿ ವೃದ್ಧಿಸುವಲ್ಲಿ ಸಹಕಾರಿಯಾಗಿದೆ.

ಮಕ್ಕಳು ಪ್ರತಿದಿನ ಬೆಳಗ್ಗೆ ಹಸಿದ ಹೊಟ್ಟೆಯಲ್ಲಿ ಒಂದೆಲಗದ 2-3 ಎಲೆಗಳನ್ನು ತಿನ್ನುವುದು ಒಳ್ಳೆಯದು. ಅಥವಾ ಒಂದೆಲಗದ ಒಂದು ಚಮಚ ರಸಕ್ಕೆ ಜೇನುತುಪ್ಪ ಬೆರೆಸಿ ಕೊಡುವುದರಿಂದಲೂ ಮಕ್ಕಳ ಜ್ಞಾಪಕಶಕ್ತಿ, ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

  1. ಒಂದೆಲಗದ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿ ಅದರಿಂದ ರಸ ತೆಗೆದು ಜೇನುತುಪ್ಪದ ಜೊತೆ ಸೇರಿಸಿ ಸೇವಿಸಿದರೆ ಕೆಮ್ಮು ನಿಯಂತ್ರಣಕ್ಕೆ ಬರುತ್ತದೆ.
  2. ಒಂದೆಲಗದ ಎಲೆಯನ್ನು ಕೊಬ್ಬರಿ ಎಣ್ಣೆಯ ಜತೆ ಕುದಿಸಿ, ಪ್ರತಿದಿನ ರಾತ್ರಿ ಮಲಗುವಾಗ ತಲೆಗೆ ಹಾಕಿಕೊಳ್ಳುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ.
  3. ಪ್ರತಿದಿನ ಆಹಾರದಲ್ಲಿ ಒಂದೆಲಗವನ್ನು ಬಳಸುವುದರಿಂದ ಮಲಬದ್ಧತೆ ಸಮಸ್ಯೆಯನ್ನು ಕ್ರಮೇಣ ದೂರ ಮಾಡಬಹುದು.
  4. ಒಂದೆಲಗದ ಎಲೆಯನ್ನು ಒಣಗಿಸಿ ಪುಡಿ ಮಾಡಿಕೊಂಡು ಪ್ರತಿದಿನ ಬಳಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.
  5. ನಾಲ್ಕು ಚಮಚ ಒಂದೆಲಗದ ರಸ, ಅರ್ಧ ಚಮಚ ಕೊತ್ತಂಬರಿ ಪುಡಿಯನ್ನು ಎಳೆನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಉರಿಮೂತ್ರ ಗುಣವಾಗುತ್ತದೆ.
  6. ಪ್ರತಿದಿನ ಒಂದೆಲಗದ 4-5 ಎಲೆಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ರಕ್ತಹೀನತೆಯೂ ನಿವಾರಣೆಯಾಗುತ್ತದೆ. 
  7. ಒಂದೆಲಗದ ಎಲೆ ಮತ್ತು ಬೇರನ್ನು ಅರೆದು ತಲೆಗೆ ಹಚ್ಚಿ, ಎರಡು ತಾಸು ಬಿಟ್ಟು ಸ್ನಾನ ಮಾಡುವುದರಿಂದ ತಲೆಯ ಹೊಟ್ಟು, ಕೂದಲು ಉದುರುವುದು ಮತ್ತು ಕೂದಲು ಸೀಳುವುದು ಮುಂತಾದ ಸಮಸ್ಯೆಗಳು ದೂರವಾಗುತ್ತವೆ.
  8. ಒಣಗಿಸಿದ ಒಂದೆಲಗದ ಎಲೆಯ ಪುಡಿ ಹಾಗೂ ಜೀರಿಗೆ ಪುಡಿಯನ್ನು ಆಕಳ ಹಾಲಿಗೆ ಬೆರೆಸಿ ಕುಡಿಯುವುದರಿಂದ ಬಾಣಂತಿಯರಿಗೆ ಹಾಲು ವೃದ್ಧಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net