

US President: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ದುರ್ಗಾ ಪೂಜಾ ಪೆಂಡಲ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ರಾಕ್ಷಸ ಮಹಿಷಾಸುರನಂತೆ ಅಸಾಮಾನ್ಯವಾಗಿ ಚಿತ್ರಿಸಲಾಗಿದ್ದು, ಇದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಬಾರಿ ವೈರಲ್ ಆಗಿದೆ.
ಬಹರಂಪುರದ ಖಾಗ್ರಾ ಸ್ವಶನ್ ಘಾಟ್ ದುರ್ಗಾ ಪೂಜಾ ಸಮಿತಿಯು ಹಬ್ಬದ ಸಂದರ್ಭದಲ್ಲಿ ವಿಗ್ರಹವನ್ನು ಅನಾವರಣಗೊಳಿಸಿದ್ದು, ದೇಶಾದ್ಯಂತ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಗ್ರಹವು ದುರ್ಗಾ ದೇವಿಯನ್ನು ಸಾಂಪ್ರದಾಯಿಕ ರೂಪದಲ್ಲಿ ತೋರಿಸಿದರೆ, ರಾಕ್ಷಸ ಮಹಿಷಾಸುರನು ಡೊನಾಲ್ಡ್ ಟ್ರಂಪ್‌ನನ್ನು ಹೋಲುತ್ತಾನೆ. ಅಸುರ ಆಕೃತಿಯು ಮಸುಕಾದ ಚರ್ಮ ಮತ್ತು ಹೊಂಬಣ್ಣದ ಕೂದಲನ್ನು ಹೊಂದಿದ್ದು, ಟ್ರಂಪ್‌ನಂತೆಯೇ ಹೋಲಿಕೆಯನ್ನು ಹೊಂದಿದೆ. ಈ ವಿಶಿಷ್ಟ ವಿಗ್ರಹವನ್ನು ಸ್ಥಳೀಯ ಕಲಾವಿದ ಅಸಿಮ್ ಪಾಲ್ ರಚಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದ್ದಾರೆ.
"ಟ್ರಂಪ್ ನಮ್ಮ ಮೇಲೆ ವಿಧಿಸಿರುವ 50% ಸುಂಕ ಮತ್ತು ಅವರು ಜಾರಿಗೆ ತಂದಿರುವ ವೀಸಾ ನೀತಿಗೆ ಪ್ರತಿಕ್ರಿಯೆಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಮ್ಮ ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್ ಅವರನ್ನು ಸ್ನೇಹಿತ ಎಂದು ಪರಿಗಣಿಸಿದ್ದಾರೆ. ಆದರೆ, ಟ್ರಂಪ್ ಮೋದಿ ಅವರಿಗೆ ದ್ರೋಹ ಬಗೆದಿದ್ದಾರೆ. ಅದಕ್ಕಾಗಿಯೇ ಅವರನ್ನು ರಾಕ್ಷಸ ಎಂದು ತೋರಿಸಲಾಗಿದೆ" ಎಂದು ಕಾರ್ಯಕ್ರಮ ಆಯೋಜಕರು ಹಾಗೂ ವಕ್ತಾರರು ತಿಳಿಸಿದ್ದಾರೆ.
ಇನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಫೋಟೋಗೆ ನೆಟ್ಟಿಗರು ತರೇಹವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. "ಈ ವಿಡಿಯೋ ನೋಡಿ ಟ್ರಂಪ್ ಈಗ ಖಿನ್ನತೆಗೆ ಒಳಗಾಗಿದ್ದಾರೆ" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಇಡೀ ಅಮೇರಿಕನ್ ಸಮಾಜವು ಭಯಭೀತವಾಗಿದೆ" ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.(ಏಜೆನ್ಸೀಸ್)