

ನವದೆಹಲಿ: ಅಮೆರಿಕದ ನೌಕಾಪಡೆಗೆ ಸೇರಿದ ಸಮರ ನೌಕೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, 17 ನಾವಿಕರು, 4 ನಾಗರಿಕರು ಗಾಯಗೊಂಡಿದ್ದಾರೆ. ಯುಎಸ್ಎಸ್ ಬೊನ್ಹೊಮ್ಮೆ ರಿಚರ್ಡ್(ಎಲ್ಎಚ್ಡಿ 6) ಎಂಬ ಯುದ್ಧ ನೌಕೆ ಇದಾಗಿದ್ದು, ಸ್ಯಾನ್ ಡಿಯಾಗೋ ಬಂದರಿನಲ್ಲಿ ಹಡಗು ತಂಗಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಅಗ್ನಿ ದುರಂತ ಸಂಭವಿಸಿದ ಸಂದರ್ಭದಲ್ಲಿ ಹಡಗಿನಲ್ಲಿ ಅಂದಾಜು 160 ಜನರಿದ್ದರು. ಕೂಡಲೇ ರಕ್ಷಣಾ ಕಾರ್ಯ ನಡೆಸಿದ್ದು, ಎಲ್ಲರನ್ನೂ ರಕ್ಷಿಸಲಾಗಿದೆ. ಇದೇ ವೇಳೆ 17 ನಾವಿಕರು ಮತ್ತು 4 ನಾಗರಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಯಾರಿಗೂ ಪ್ರಾಣಾಪಾಯವಿಲ್ಲ ಎಂದು ಅಮೆರಿಕದ ನೇವಿ ಸಿಎನ್ಒ ಅಡ್ಮಿರಲ್ ಮೈಕೆಲ್ ಎಂ. ಗಿಲ್ಡೇ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಸಮುದಾಯಕ್ಕೆ ಹರಡಿತಾ ಸೋಂಕು?
ಸ್ಥಳೀಯ ಬಂದರಿನ ಅಧಿಕಾರಿಗಳು ಕ್ಷಿಪ್ರವಾಗಿ ಕ್ರಮತೆಗೆದುಕೊಂಡ ಕಾರಣ ಹೆಚ್ಚಿನ ಅನಾಹುತವೇನೂ ಸಂಭವಿಸಿಲ್ಲ. ಬಂದರಿನಲ್ಲಿದ್ದ ಅಗ್ನಿಶಾಮಕ ಸೇವೆಯವರು ಕೂಡಲೇ ರಕ್ಷಣಾ ಕಾರ್ಯ ಕೈಗೊಂಡು ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ ಎಂದೂ ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)