ಬಾಲಿವುಡ್​ ಕಾಮಕಾಂಡ!; ನಟಿ ಊರ್ವಶಿ ರೌಟೇಲಾ ಕಡೆಯಿಂದ ಅಚ್ಚರಿಯ ಹೇಳಿಕೆ!

123
Published on

ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಹಿರಿಯ ನಿರ್ದೇಶಕ ಮತ್ತು ಕೆಲ ಸ್ಟಾರ್ ನಟಿಯರು ಮಾಡೆಲಿಂಗ್​ ನೆಪದಲ್ಲಿ ಬಾಲಿವುಡ್​ ಕಾಮಕಾಂಡದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಹಿರಿಯ ನಿರ್ದೇಶಕ ಮಹೇಶ್ ಭಟ್​, ನಟಿ ಮೌನಿ ರಾಯ್ ಮತ್ತು ಊರ್ವಶಿ ರೌಟೇಲ್​ಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸೊಂದನ್ನು ಕಳುಹಿಸಿತ್ತು. ಮಾಡೆಲಿಂಗ್​ ಮತ್ತು ಸಿನಿಮಾ ನೆಪದಲ್ಲಿ ಹುಡುಗಿಯರನ್ನು ಬಲೆಗೆ ಬೀಳಿಸಿಕೊಳ್ಳುವುದಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ನೋಟಿಸ್​ನಲ್ಲಿ ನಮೂದು ಮಾಡಲಾಗಿತ್ತು. ಇದೀಗ ಈ ಆರೋಪಕ್ಕೆ ಸಂಬಂಧಪಟ್ಟಂತೆ ನಟಿ ಊರ್ವಶಿ ರೌಟೇಲಾ ಪ್ರತಿಕ್ರಿಯಿಸಿದ್ದಾರೆ.

'ನಿಜಕ್ಕೂ ಇದು ಶಾಕಿಂಗ್​ ಬೆಳವಣಿಗೆ. ನಾಚಿಕೆಗೇಡಿನ ಕೆಲಸ ಮಾಡಿರುವ ಈ ಸಂಸ್ಥೆಯಲ್ಲಿ ನನ್ನ ಪಾಲುದಾರಿಕೆ ಇಲ್ಲ. ಕ್ಲೈಂಟ್​ ಜತೆಗೆ ಮಾತುಕತೆ ಮಾಡಿಕೊಂಡಂತೆ, ನವೆಂಬರ್​ನಲ್ಲಿ ನಡೆಯಲಿರುವ ಫಿನಾಲೆಯಲ್ಲಿ ಮಾತ್ರ ನಾನು ಸೆಲೆಬ್ರಿಟಿ ತೀರ್ಪುಗಾರರಾಗಿ ಭಾಗವಹಿಸಬೇಕಿತ್ತು. ಆಯ್ಕೆ ಪ್ರಕ್ರಿಯೆ ಸೇರಿ ಕಂಪನಿಯ ಬೇರಾವ ಚಟುವಟಿಕೆಗಳಲ್ಲಿ ನಾನು ಭಾಗವಹಿಸಿಲ್ಲ’ ಎಂದಿದ್ದಾರೆ ಊರ್ವಶಿ.

ಇತ್ತೀಚೆಗಷ್ಟೇ ಸಾಮಾಜಿಕ ಹೋರಾಟಗಾರ್ತಿ ಯೋಗಿತಾ ಭಯಾನಾ, ಕಿರು ವಿಡಿಯೋವೊಂದನ್ನು ಮಾಡಿ, ಮಾಡೆಲಿಂಗ್​ ಹೆಸರಿನಲ್ಲಿ ಮಹಿಳೆಯರನ್ನು ಕಾಮದ ಕೆಲಸಕ್ಕೆ ಬಳಸಿಕೊಳ್ಳುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ. ಈ ದಂಧೆಯಲ್ಲಿ ಬಾಲಿವುಡ್​ನ ಘಟಾನುಘಟಿಗಳು ಪಾಲುದಾರರಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು.

ಐಎಂಜಿ ಸಂಸ್ಥೆಯ ಸನ್ನಿ ವರ್ಮಾ ಮಾಡೆಲಿಂಗ್​ ನೆಪದಲ್ಲಿ ಮುಗ್ದ ಯುವತಿಯರನ್ನು ಬೇರೆ ರೀತಿಯಲ್ಲಿಯೇ ಬಳಸಿಕೊಳ್ಳುತ್ತಿದ್ದಾನೆಂದು ಆರೋಪಿಸಿದ್ದು, ಆತನ ಕಂಪನಿಗೆ ಮತ್ತು ಆತನ ಜಾಹೀರಾತಿಗಳಿಗೆ ಮಹೇಶ್ ಭಟ್​, ಮೌನಿ ರಾಯ್​, ಊರ್ವಶಿ ರೌಟೇಲ್​ ಸೇರಿ ಅನೇಕ ಬಾಲಿವುಡ್​ ಮಂದಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಕೈವಾಡವೂ ಇದೆ ಎಂದು ಯೋಗಿತಾ, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.

ಈ ದೂರನ್ನು ಸ್ವೀಕರಿಸಿರುವ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ಈ ದಂಧೆಯಲ್ಲಿ ಬಾಲಿವುಡ್​ ಮಂದಿಯ ಕೈವಾಡವಿದೆಯೇ ಎಂಬುದನ್ನು ಪ್ರಶ್ನಿಸುವ ಉದ್ದೇಶದಿಂದ ಅವರ ವಿರುದ್ಧ ನೋಟಿಸ್​ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದ್ದಾರೆ. ಒಂದು ವೇಳೆ ವಿಚಾರಣೆಗೆ ಆಗಮಿಸದೆ ಇದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಅವರು ಟ್ವಿಟ್​ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net