More

    Success Story: ಕೋಚಿಂಗ್ ಹೋಗಲೇ ಇಲ್ಲೆ… ಆದ್ರೂ ಐಎಎಸ್ ಪಾಸ್; ಏನಿದರ‌ ಗುಟ್ಟು..?

    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್​ ತೆಗೆದುಕೊಳ್ಳಲು ದೊಡ್ಡ ನಗರಗಳಿಗೆ ತೆರಳುವ ಬದಲು ಮನೆಯಲ್ಲಿಯೇ ಇದ್ದು, ಸಾಮಾಜಿಕ ಜಾಲತಾಣ ಹಾಗೂ ವಿವಿಧ ಮೂಲಗಳಿಂದ ಅಧ್ಯಯನ ಸಾಮಗ್ರಿ ಸಂಗ್ರಹಿಸಿ ಸ್ಪಷ್ಟ ಗುರಿಯೊಂದಿಗೆ ಪರಿಶ್ರಮಪಟ್ಟು ಓದಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಐಎಎಸ್​ ಅಧಿಕಾರಿ ಎಂ. ಪ್ರಿಯಾಂಗಾ.

     | ರುದ್ರಯ್ಯ. ಎಸ್​. ಎಸ್​.

    2017ನೇ ಬ್ಯಾಚ್​ನಲ್ಲಿ 149ನೇ ರ‍್ಯಾಂಕ್​ ಪಡೆದು ಪ್ರಸ್ತುತ ಹುಬ್ಬಳ್ಳಿ&ಧಾರವಾಡ ಸ್ಮಾರ್ಟ್​ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಿಯಾಂಗಾ ಅವರು ಮೂಲತಃ ತಮಿಳುನಾಡಿನ ವೆಲ್ಲೂರು ಜಿಲ್ಲೆಯವರು. ತಂದೆ ವಿದ್ಯುತ್​ ಇಲಾಖೆಯಲ್ಲಿ ಲೈನ್​ ಇನ್​ಸ್ಪೆಕ್ಟರ್​ ಆಗಿ ನಿವೃತ್ತರಾಗಿದ್ದು, ತಾಯಿ ಗೃಹಿಣಿ. ಪಿಯುಸಿವರೆಗೂ ಸರ್ಕಾರಿ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಅಧ್ಯಯನ ಮಾಡಿದ ಇವರು, 10ನೇ ತರಗತಿಯಲ್ಲಿ ಜಿಲ್ಲೆಗೆ ದ್ವೀತಿಯ ಸ್ಥಾನ ಪಡೆದಿದ್ದು, 12ನೇ ತರಗತಿಯಲ್ಲಿ 95% ಅಂಕ ಗಳಿಸಿದ್ದಾರೆ. ಸೇಲಂನ ಸರ್ಕಾರಿ ಕಾಲೇಜ್​ನಲ್ಲಿ ಬಿಇ ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​ನಲ್ಲಿ ಪದವಿ ಪಡೆದಿದ್ದಾರೆ. ಹೆಚ್ಚಿನ ಅಧ್ಯಯನಕ್ಕೆ ಚೆನ್ನೈಗೆ ತೆರಳಲು ವೆಲ್ಲೂರಿನಲ್ಲಿರುವ ಟ್ರಸ್ಟ್​ವೊಂದು ವಿದ್ಯಾರ್ಥಿವೇತನ ನೀಡುವ ಮೂಲಕ ಒಂದು ವರ್ಷ ಆರ್ಥಿಕ ಸಹಾಯ ಮಾಡಿತ್ತು’ ಎಂದು ನೆನಪಿಸಿಕೊಂಡ ಪ್ರಿಯಾಂಗಾ, ಚಿಕ್ಕ ವಯಸ್ಸಿನಿಂದಲೇ ಜನರ ಸೇವೆ ಮಾಡಬೇಕೆಂಬ ಹಂಬಲವೇ ಈ ಸಾಧನೆಗೆ ಸ್ಪೂರ್ತಿ ಎನ್ನುತ್ತಾರೆ.

    ಪರೀಕ್ಷೆ ತಯಾರಿ

    ಈ ಮೊದಲು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. 2012ರಿಂದ ಯುಪಿಎಸ್​ಸಿ ಪರೀಕ್ಷೆಗೆ ಅಧ್ಯಯನ ಮಾಡಲು ಪ್ರಾರಂಭಿಸಿದೆ. ನಮ್ಮದು ಹಿಂದುಳಿದ ಜಿಲ್ಲೆಯಾಗಿದ್ದು, ಓದುವ ಹಂತದಲ್ಲಿ ತಂದೆ, ತಾಯಿ, ಅಣ್ಣ ಸೇರಿದಂತೆ ಕುಟುಂಬದವರಿಂದ ಸಂಪೂರ್ಣ ಸಹಕಾರ ಸಿಕ್ಕಿತು. ಹಾಗಾಗಿ 2016ರ ಪರೀಕ್ಷೆಯಲ್ಲಿ ತೇರ್ಗಡೆಯಾದೆ ಎನ್ನುತ್ತಾರೆ ಪ್ರಿಯಾಂಗಾ.

    4ನೇ ಬಾರಿ ಕ್ಲಿಯರ್​

    ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್​ ಕ್ಲಿಯರ್​ ಆಯ್ತು. ಆದರೆ ಮೇನ್ಸ್​ ಕ್ಲಿಯರ್​ ಆಗಲಿಲ್ಲ. 2ನೇ ಪ್ರಯತ್ನದಲ್ಲಿ ಸಂದರ್ಶನದವರೆಗೆ ಹೋಗಿ ಹಿಂದಿರುಗಿದೆ. 3ನೇ ಪ್ರಯತ್ನದಲ್ಲಿ ಪ್ರಿಲಿಮ್ಸ್​ ಸಹ ಪಾಸಾಗಲಿಲ್ಲ. ಹಾಗೆಂದು ಪ್ರಯತ್ನ ಬಿಡಲಿಲ್ಲ. ಯಶಸ್ಸಿಗಾಗಿ ಮರಳಿ ಯತ್ನವ ಮಾಡು ಎಂಬ ಮಾತಿನಂತೆ 4ನೇ ಪ್ರಯತ್ನದಲ್ಲಿ 149ನೇ ರ‍್ಯಾಂಕ್​ ಗಳಿಸಿದೆ ಎನ್ನುವ ಪ್ರಿಯಾಂಗಾ, ಕೇಂದ್ರ ಸರ್ಕಾರದ ಶಾರ್ಟ್​ ಸರ್ವೀಸ್​ ಕಮಿಷನ್​ (SSC) ಪರೀಕ್ಷೆಯಲ್ಲಿ ಪಾಸಾಗಿ 2015ರಲ್ಲಿ ಪೋಸ್ಟಲ್​ ಅಸಿಸ್ಟಂಟ್​ ಆಗಿ ಸೇರಿಕೊಂಡರು. ಕೆಲಸದ ಜತೆಗೆ ಪರೀಕ್ಷೆ ತಯಾರಿ ಮುಂದುವರೆಸಿದ್ದರಿಂದ ಯಾವುದೇ ಖಾಸಗಿ ಸಂಸ್ಥೆಗಳಿಂದ ಕೋಚಿಂಗ್​ ತೆಗೆದುಕೊಳ್ಳಲಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಅಧ್ಯಯನ ಸಾಮಗ್ರಿ ಸಂಗ್ರಹಿಸಿ, ಸ್ವ-ಅಧ್ಯಾಯ ಮಾಡುತ್ತಿದ್ದರು. ಸರ್ಕಾರಿ ಸಂಸ್ಥೆಗಳು ಹಾಗೂ ವಿವಿಧ ಮೂಲಗಳಿಂದ ಸಂದರ್ಶನ ಕುರಿತು ತಯಾರಿ ನಡೆಸುತ್ತಿದ್ದರು. ಇದರಿಂದಾಗಿ ಪರೀಕ್ಷೆಗೆ ಸಂಬಧಿಸಿದ ವಿಷಯಗಳ ಜತೆಗೆ ಪ್ರಚಲಿತ ಘಟನೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು.

    ಆತ್ಮವಿಶ್ವಾಸವೇ ಸಂದರ್ಶನ

    ಲಿಖಿತ ಪರೀಕ್ಷೆಗಳ ಮೂಲಕ ಅಭ್ಯರ್ಥಿಯ ಜ್ಞಾನ ಸಾಮರ್ಥ್ಯ ಅಳೆದಿರುತ್ತಾರೆ. ಹಾಗಾಗಿ ಸಂದರ್ಶನದಲ್ಲಿ ಪ್ರಚಲಿತ ಘಟನೆಗಳ ಕುರಿತು ಪ್ರಶ್ನಿಸುವುದರೊಂದಿಗೆ ಆತ್ಮವಿಶ್ವಾಸ ಮತ್ತು ಮಾತನಾಡುವ ಬಗೆಯನ್ನು ಪರಿಶೀಲಿಸುತ್ತಾರೆ. ಸಂದರ್ಶಕರು ಹೆಚ್ಚಾಗಿ ಅಭ್ಯರ್ಥಿಯು ಮೊದಲೇ ತುಂಬಿ ಕೊಟ್ಟಿರುವ ಡೀಟೈಲ್ಡ್​ ಅಪ್ಲಿಕೇಷನ್​ ಫಾರ್ಮ್ ಆಧಾರದ ಮೇಲೆಯೇ ಪ್ರಶ್ನೆಗಳನ್ನು ಕೇಳುತ್ತಾರೆ. ಜತೆಗೆ ನಾವು ಅವರೊಡನೆ ನಡೆದುಕೊಳ್ಳುವ ರೀತಿ ರಿವಾಜುಗಳನ್ನು ಗಮನಿಸುತ್ತಾರೆ ಎಂದು ತಿಳಿಸಿದ ಪ್ರಿಯಾಂಗಾ ಅವರು, ನಾನು ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದುದ್ದರಿಂದ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳು ಹಾಗೂ ನನ್ನ ಹವ್ಯಾಸಗಳ ಕುರಿತು ಕೇಳಿದ್ದರು. ಅದೇ ವರ್ಷ ಅರಣ್ಯ ಇಲಾಖೆಗೆ ಸಂಬಂಧಿಸಿದ ಹುದ್ದೆಗ ಸಂದರ್ಶನ ಎದುರಿಸಿದ್ದರಿಂದಾಗಿ ಇದು ಇನ್ನೂ ಸುಲಭವಾಯಿತು. ಹಾಗಾಗಿ ಯುಪಿಎಸ್​ಸಿ ಸಂದರ್ಶನದಲ್ಲಿ ಒಟ್ಟು 225 ಅಂಕಗಳಿಗೆ 188 ಅಂಕಗಳನ್ನು ಗಳಿಸಿದೆ ಎಂದು ತಿಳಿಸಿದರು.

    ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಸಲಹೆ

    ಸಾಧನೆ ಮಾಡಲು ಕೇವಲ ದೊಡ್ಡ ದೊಡ್ಡ ಸಂಸ್ಥೆ, ಶಾಲೆ,ಕಾಲೇಜ್​ ಕ್ಯಾಂಪಸ್​ಗಳಲ್ಲಿ ಓದಿರಬೇಕೆಂದಿಲ್ಲ. ಸಣ್ಣ ಗ್ರಾಮೀಣ ಪ್ರದೇಶದಲ್ಲಿಯೇ ಓದಿ ಬೆಳೆದಿದ್ದರೂ ಸ್ಪಷ್ಟವಾದ ಗುರಿ ಮುಟ್ಟಲು ಸತತ ಅಧ್ಯಯನದ ಜತೆಗೆ ಪರಿಪೂರ್ಣ ತೊಡಗಿಸಿಕೊಳ್ಳುವಿಕೆ ವಿದ್ಯಾರ್ಥಿಗಳಲ್ಲಿ ಇರಬೇಕು. ಪ್ರಸ್ತುತ ದಿನಮಾನಗಳಲ್ಲಿ ಶೈಕ್ಷಣಿಕ ಮಾಹಿತಿ ಸಂಗ್ರಹಿಸಲು ಸಾಕಷ್ಟು ಅವಕಾಶಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಪ್ರಚಲಿತ ಘಟನೆಗಳ ಕುರಿತು ತಿಳಿಯಲು ಪ್ರತಿನಿತ್ಯ ದಿನ ಪತ್ರಿಕೆ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಓದಲು ಮನೆಯಲ್ಲಿ ಒಳ್ಳೆಯ ವಾತಾವರಣ ನಿರ್ಮಿಸುವಲ್ಲಿ ಕುಟುಂಬದವರ ಸಹಕಾರವೂ ಮುಖ್ಯ. ಓದುವ ಹಂತದಲ್ಲಿ ಅನ್ಯ ಚಟುವಟಿಕೆಗಳ ಕಡೆಗೆ ಗಮನ ಹರಿಸಬಾರದು. ಎಲ್ಲದಕ್ಕಿಂತ ಮುಖ್ಯವಾಗಿ ಭಾರತೀಯ ಲೋಕಸೇವಾ ಆಯೋಗದಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಹಂತದಲ್ಲಿಯೂ ಜನರ ಸೇವೆಗೆ ಕಟಿಬದ್ಧರಾಗಿರಬೇಕು ಎಂದು ಐಎಎಸ್​ ಅಧಿಕಾರಿ ಪ್ರಿಯಾಂಗಾ ಸಲಹೆ ನೀಡಿದರು.

    ಇತರ ಸ್ಥಳಗಳಲ್ಲಿ ಕಾರ್ಯ ನಿರ್ವಹಣೆ

    ಹಾಸನ ಜಿಲ್ಲೆಯಲ್ಲಿ ಪ್ರೊಬೇಷನರಿ ಹುದ್ದೆ ಅಲಕರಿಸಿದ್ದು, ಉತ್ತರ ಕನ್ನಡ ಜಿಲ್ಲೆ ಕಾರವಾರ ಉಪ ವಿಭಾಗಾಧಿಕಾರಿ ಹಾಗೂ ಸಿಇಒ ಆಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

    ಜನಜೀವನ ಬದಲಿಸುವ ಅವಕಾಶ

    ಉನ್ನತ ಹಂತದ ಅಧಿಕಾರಿಗಳ ಕೈಯಲ್ಲಿ ಸಾಮಾನ್ಯ ಜನರ ಬದುಕು ಬದಲಿಸುವ ಅವಕಾಶವಿದ್ದು, ಸರಿಯಾಗಿ ಕೆಲಸ ಮಾಡಿದರೇ ಸಮಾಜದ ಜತೆಗೆ ದೇಶ ಅಭಿವೃದ್ಧಿಯಾಗುತ್ತದೆ.

    ಸರ್ಕಾರಿ ಕಚೇರಿಗಳಿಗೆ ಹೇಗೆ ಹೋಗಬೇಕು. ಅಧಿಕಾರಿಗಳ ಜತೆಗೆ ಯಾವ ರೀತಿ ವ್ಯವಹರಿಸಬೇಕು ಎನ್ನುವ ಕುರಿತು ಸಾರ್ವಜನಿಕರಲ್ಲಿಯು ಈಗ ಅರಿವು ಮೂಡಿದ್ದು, ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣ ಇರುತ್ತದೆ. ಇದರಿಂದಾಗಿ ಹೆಚ್ಚಿನ ಉತ್ಸಾಹದಿಂದ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿದೆ.
    – ಎಂ. ಪ್ರಿಯಾಂಗಾ, ಹುಬ್ಬಳ್ಳಿ&ಧಾರವಾಡ ಸ್ಮಾರ್ಟ್​ ಸಿಟಿ ವ್ಯವಸ್ಥಾಪಕ ನಿರ್ದೇಶಕರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts