ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಂಚನೆ ಬಹಿರಂಗ; ಯುಪಿಎಸ್​ಸಿಯಿಂದ ಪ್ರಕರಣ ದಾಖಲು

Untitled-design-35-1
Published on

ನವದೆಹಲಿ: ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಅಂಗವೈಕಲ್ಯ ಪ್ರಮಾಣಪತ್ರಗಳನ್ನು ನಕಲಿ ಮಾಡಿದ ಆರೋಪದ ಮೇಲೆ ತನಿಖೆ ನಡೆಯುತ್ತಿದ್ದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಶುಕ್ರವಾರ (ಜುಲೈ 19) ಪ್ರಕರಣ ದಾಖಲಿಸಿದೆ.

ಯುಪಿಎಸ್​ಸಿ ಪೊಲೀಸ್ ಅಧಿಕಾರಿಗಳಿಗೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಸಲ್ಲಿಸುವ ಮೂಲಕ ಕ್ರಿಮಿನಲ್ ಪ್ರಾಸಿಕ್ಯೂಷನ್ ಸೇರಿದಂತೆ ಆಕೆಯ ವಿರುದ್ಧ ಕ್ರಮಗಳ ಸರಣಿಯನ್ನು ಪ್ರಾರಂಭಿಸಿದೆ. ನಾಗರಿಕ ಸೇವಾ ಪರೀಕ್ಷೆ -2022ರಿಂದ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಲು ಮತ್ತು ಮುಂದಿನ ಪರೀಕ್ಷೆಗಳಿಂದ ಅವರನ್ನು ಡಿಬಾರ್ ಮಾಡಲು ಶೋಕಾಸ್ ನೋಟಿಸ್ ನೀಡಿದೆ.

ನಾಗರಿಕ ಸೇವಾ ಪರೀಕ್ಷೆ-2022ರ ತಾತ್ಕಾಲಿಕವಾಗಿ ಶಿಫಾರಸು ಮಾಡಲಾದ ಅಭ್ಯರ್ಥಿ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರ ದುಷ್ಕೃತ್ಯದ ಬಗ್ಗೆ ವಿವರವಾದ ಮತ್ತು ಸಂಪೂರ್ಣ ತನಿಖೆ ನಡೆಸಲಾಗಿದೆ ಎಂದು ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ತನಿಖೆಯಿಂದ ಆಕೆ ತನ್ನ ಹೆಸರು, ತಂದೆ ಮತ್ತು ತಾಯಿಯ ಹೆಸರು, ಭಾವಚಿತ್ರ, ಸಹಿ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಬದಲಾಯಿಸುವ ಮೂಲಕ ತನ್ನ ಗುರುತನ್ನು ನಕಲಿ ಮಾಡಿ ಪರೀಕ್ಷಾ ನಿಯಮಗಳ ಅಡಿಯಲ್ಲಿ ಅನುಮತಿಸುವ ಮಿತಿಯನ್ನು ಮೀರಿ ವಂಚನೆಗೆ ಪ್ರಯತ್ನಿಸಿದ್ದಾಳೆ ಎಂಬುದು ತಿಳಿದುಬಂದಿದೆ ಎಂದು ಹೇಳಿದೆ.

ಸಾಂವಿಧಾನಿಕ ಆದೇಶಕ್ಕೆ ಕಟ್ಟುನಿಟ್ಟಾಗಿ ಬದ್ಧವಾಗಿದ್ದು, ನಿಯಮಗಳನ್ನು ಅನುಸರಿಸುವುದು ಅಥವಾ ಜಾರಿಗೊಳಿಸುವುದು ಸಾಂವಿಧಾನಿಕ ಸಂಸ್ಥೆಯಾಗಿರುವ ನಮ್ಮ ಜವಾಬ್ದಾರಿಯಾಗಿದೆ ಎಂದು ಯುಪಿಎಸ್‌ಸಿ ಹೇಳಿದೆ. ಪರೀಕ್ಷೆಯಲ್ಲಿ ಯಾವುದೇ ರೀತಿಯ ರಿಗ್ಗಿಂಗ್ ಮಾಡಬಾರದು ಮತ್ತು ಯಾರಾದರೂ ತಪ್ಪು ಮಾಡುತ್ತಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದ್ದೇವೆ. ಅದರ ಪ್ರಕಾರ ನಾವು ನಂಬಿಕೆ ಗಳಿಸಿದ್ದೇವೆ ಎಂದು ಯುಪಿಎಸ್‌ಸಿ ಹೇಳಿದೆ. ಅದರಲ್ಲೂ ಅಭ್ಯರ್ಥಿಗಳು ನಮ್ಮ ಮೇಲೆ ವಿಶ್ವಾಸವಿಟ್ಟಿದ್ದಾರೆ. ಜನರ ವಿಶ್ವಾಸವನ್ನು ಉಳಿಸಿಕೊಳ್ಳಲು ನಾವು ಬದ್ಧರಾಗಿದ್ದು, ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net