

ಲೂಯಿಸ್ವಿಲ್ಲೆ: ಕೆಂಟುಕಿಯ ಲೂಯಿಸ್ವಿಲ್ಲೆಯಲ್ಲಿರುವ ಏರ್ಪೋರ್ಟ್ನಲ್ಲಿ ಯುಪಿಎಸ್ ಸರಕು ಸಾಗಾಟ ಮಾಡುತ್ತಿದ್ದ ವಿಮಾನ ಟೇಕಾಫ್ ಆಗುವಾಗ ಸ್ಫೋಟಗೊಂಡಿದ್ದು(Plane explodes), ಕನಿಷ್ಠ ಮೂವರು ಮೃತಪಟ್ಟಿದ್ದು, 11 ಮಂದಿಗೆ ಗಾಯಗೊಂಡಿದ್ದಾರೆ ಎಂದು ಬುಧವಾರ(ನ. 05) ವರದಿಯಾಗಿದೆ.
ಲೂಯಿಸ್ವಿಲ್ಲೆಯ ಮುಹಮ್ಮದ್ ಅಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊನೊಲುಲುವಿಗೆ ಹೊರಡುತ್ತಿದ್ದಾಗ ಮಂಗಳವಾರ ಸಂಜೆ 5.15ರ ಸುಮಾರಿಗೆ ವಿಮಾನ ಅಪಘಾತಕ್ಕೀಡಾಗಿದೆ ಎಂದು ಫೆಡರಲ್ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ.
ಇನ್ನೂ ವಿಮಾನದ ಸ್ಫೋಟವು ವಿಡಿಯೋದಲ್ಲಿ ದಾಖಲಾಗಿದ್ದು, ಮೊದಲಿಗೆ ವಿಮಾನದ ಎಡ ರೆಕ್ಕೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಕಾಣಿಸಿಕೊಂಡಿದೆ. ಬಳಿಕ ವಿಮಾನವು ನೆಲದಿಂದ ಸ್ವಲ್ಪ ಮೇಲಕ್ಕೆರುತ್ತಿದ್ದಂತೆ ತಕ್ಷಣವೇ ನೆಲಕ್ಕೆ ಅಪ್ಪಳಿಸಿ ಸ್ಪೋಟಗೊಂಡಿದೆ.
ಈ ಕುರಿತು ಮಾತನಾಡಿರುವ ಕೆಂಟುಕಿ ಗವರ್ನರ್ ಆಂಡಿ ಬೆಶಿಯರ್, ಘಟನೆಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. 11 ಮಂದಿಗೆ ಗಂಭೀರ ಗಾಯಗಳಾಗಿವೆ. ಘಟನೆಯ ಫೋಟೋ ಮತ್ತು ವೀಡಿಯೊವನ್ನು ನೋಡಿದ ಯಾರಿಗಾದರೂ ಈ ಅಪಘಾತ ಎಷ್ಟು ಹಿಂಸಾತ್ಮಕವಾಗಿದೆ ಎಂದು ತಿಳಿದಿದೆ. ಮೆಕ್ಡೊನೆಲ್ ಡೌಗ್ಲಾಸ್ MD-11 ವಿಮಾನದಲ್ಲಿದ್ದ ಮೂವರು ಸಿಬ್ಬಂದಿಗಳ ಸ್ಥಿತಿ ಏನೆಂಬುದು ಇನ್ನು ತಿಳಿದಿಲ್ಲ ಎಂದು ಹೇಳಿದ್ದಾರೆ.
ಯುಪಿಎಸ್ನ ಅತಿದೊಡ್ಡ ಪ್ಯಾಕೇಜ್ ನಿರ್ವಹಣಾ ಸೌಲಭ್ಯವು ಲೂಯಿಸ್ವಿಲ್ಲೆಯಲ್ಲಿದೆ. ಈ ಹಬ್ ಸಾವಿರಾರು ಕಾರ್ಮಿಕರನ್ನು ನೇಮಿಸಿಕೊಂಡಿದೆ. (ಏಜೆನ್ಸೀಸ್)