

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಸಮುದಾಯ ಆಸ್ಪತ್ರೆಯಲ್ಲಿ ವೈದ್ಯರು ನಿಷ್ಕ್ರೀಯರಾಗಿದ್ದು, ಹೊರಗಿನಿಂದ ಔಷಧ ಖರೀದಿಸುವಂತೆ ಚೀಟಿ ಬರೆದುಕೊಡುತ್ತಾರೆ. ಆಸ್ಪತ್ರೆಯಲ್ಲಿ ಔಷಧ ದಾಸ್ತಾನು ಇಲ್ಲದಾಗಿದೆ. ಜತೆಗೆ ಆಸ್ಪತ್ರೆಗೆ ಆಗಮಿಸುವ ಗರ್ಭಿಣಿಯರು ಚಿಕಿತ್ಸೆ ಸಿಗದೆ ಪ್ರಾಣವೇದನೆ ಅನುಭವಿಸುತ್ತಿದ್ದಾರೆ ಎಂದು ಉಪ್ಪಿನಂಗಡಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ಅಧ್ಯಕ್ಷತೆಯಲ್ಲಿ ಶುಕ್ರವಾರ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ನಿರ್ವಹಣೆ, ವೈದ್ಯರ ಅಸಮರ್ಪಕ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊರಹಾಕಿದರು. ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಮೇಲಾಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳುವ ಕುರಿತು ನಿರ್ಣಯಿಸಲಾಯಿತು.
ಆರೋಗ್ಯ ಸಹಾಯಕಿ ಮರಿಯಮ್ಮಾ ಇಲಾಖೆ ಕುರಿತು ಮಾಹಿತಿ ನೀಡುತ್ತಿದ್ದಂತೆ ಮತ್ತೊಮ್ಮೆ ಆಕ್ರೋಶಗೊಂಡ ಗ್ರಾಮಸ್ಥರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೆಡಿಕಲ್ ವಿದ್ಯಾರ್ಥಿಗಳ ಮೂಲಕ ತಪಾಸಣೆ ನಡೆಸುವಿಕೆ, ಔಷಧ ಖರೀದಿಗೆ ಖಾಸಗಿ ಮೆಡಿಕಲ್ ಅವಲಂಬನೆ ಕುರಿತು ತರಾಟೆಗೆ ತೆಗೆದುಕೊಂಡರು.
ಸಹಕಾರಿ ಸಂಘ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು, ಪದಾಧಿಕಾರಿಗಳಾದ ಲಕ್ಷ್ಮಣ ಗೌಡ, ಧರ್ನಪ್ಪ ನಾಯ್ಕ, ವೆಂಕಪ್ಪ ಪೂಜಾರಿ, ಆದಂ ಕೊಪ್ಪಳ, ಮಜೀದ್, ಯು.ಟಿ.ಇರ್ಷಾದ್, ಮಹಮ್ಮದ್ ಕೆಂಪಿ, ಲತೀಫ್ ವಿವಿಧ ವಿಚಾರಗಳ ಕುರಿತು ಮಾತನಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಕೆ. ಅಬ್ದುಲ್ ರಹಿಮಾನ್, ಸುರೇಶ್ ಅತ್ರಮಜಲು, ಯು.ಟಿ.ತೌಸೀಫ್, ಲೋಕೇಶ್ ಬೆತ್ತೋಡಿ, ಸಂಜೀವ, ಧನಂಜಯ ಕುಮಾರ್, ಯು.ಕೆ.ಇಬ್ರಾಹಿಂ, ಮೈಸಿದಿ ಇಬ್ರಾಹಿಂ, ಅಬ್ದುಲ್ ರಸೀದ್, ಉಷಾಚಂದ್ರ ಮುಳಿಯ, ಉಷಾ ನಾಯ್ಕ, ರುಕ್ಮಿಣಿ, ಶೋಭಾ, ಜಯಂತಿ, ವನಿತಾ, ನೆಬಿಸಾ ಉಪಸ್ಥಿತರಿದ್ದರು. ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿದರು. ಕಾರ‌್ಯದರ್ಶಿ ಗೀತಾ ಶೇಖರ್ ವಂದಿಸಿದರು.
ಖಾಸಗಿ ಕ್ಲಿನಿಕ್‌ನಲ್ಲಿ ಸರ್ಕಾರಿ ವೈದ್ಯ: ಸಮುದಾಯ ಕೆಂದ್ರದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ವೈದ್ಯರು ಸಮೀಪವೇ ಇರುವ ತಮ್ಮ ಖಾಸಗಿ ಕ್ಲಿನಿಕ್‌ನಲ್ಲಿ ಸೇವೆಯಲ್ಲಿ ನಿರತರಾಗಿರುತ್ತಾರೆ. ಸಣ್ಣ ಆರೋಗ್ಯ ಸಮಸ್ಯೆಗೂ ಸೂಕ್ತ ಚಿಕಿತ್ಸೆ ನೀಡದೆ ಖಾಸಗಿ ಆಸ್ಪತ್ರೆಗೆ ಶಿಾರಸು ಮಾಡುತ್ತಾರೆ. ಈ ಕುರಿತು ಗ್ರಾಮಸ್ಥರು ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷಿಸುತ್ತಲೇ ಇದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ನಿಯಂತ್ರಣಾಧಿಕಾರಿ ಲೋಕೇಶ್ ಪ್ರತಿಕ್ರಿಯಿಸಿ, ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಆರೋಗ್ಯ ರಕ್ಷಾ ಸಮಿತಿಯಲ್ಲಿಯೂ ಚರ್ಚೆಯಾಗಿದೆ. ದೂರುಗಳು ಮತ್ತೂ ಮುಂದುವರೆದಿದ್ದು, ಈ ಕುರಿತು ತಕ್ಷಣವೇ ನಿರ್ಣಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಆರೋಗ್ಯ ಸಚಿವರಿಗೆ ದೂರು?
ಸಮುದಾಯ ಆಸ್ಪತ್ರೆಯ ಅವ್ಯವಸ್ಥೆ, ಅಲ್ಲಿನ ವೈದ್ಯಾಧಿಕಾರಿಯ ಅಸಮರ್ಪಕ ಸೇವೆ ಸಹಿತ ವಿವಿಧ ಗಂಭೀರ ವಿಚಾರಗಳ ಕುರಿತು ಜಿಲ್ಲಾ ಆರೋಗ್ಯ ಸಚಿವರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗೆ ದೂರು ನೀಡಬೇಕು ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಒತ್ತಾಯಿಸಿದರು.