ದಾಖಲೆಗಳು ಸರಿಯಾಗಿಲ್ಲ, ಅಧಿಕಾರಿ ಬರಲಿಲ್ಲ: ಉಪ ಲೋಕಾಯುಕ್ತ ಬಿ.ವೀರಪ್ಪ ಆಕ್ರೋಶ

Upalokayukta visits Induval Gram Panchayat office Mandya
Published on

ಮಂಡ್ಯ: ಉಪಲೋಕಾಯುಕ್ತ ಬಿ.ವೀರಪ್ಪ ಅವರು ತಾಲೂಕಿನ ಇಂಡುವಾಳು ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವ್ಯವಸ್ಥೆ ಅನಾವರಣಗೊಂಡವು.

ಹಾಜರಾತಿ, ಚಲನ ವಲನ ವಹಿ, ನಗದು ವಹಿ, 15ನೇ ಹಣಕಾಸು ಯೋಜನೆ ವಹಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ವಹಿಗಳನ್ನು ಪೂರ್ಣಗೊಳಿಸದಿರುವ ಹಾಗೂ ಚೆಕ್‌ಗಳಿಗೆ ಪಿಡಿಒ ಸಹಿ ಮಾಡಿ ಯಾರದೇ ಹೆಸರು ನಮೂದಿಸದೇ ಇರುವ ಬಗ್ಗೆ ತರಾಟೆಗೆ ತೆಗೆದುಕೊಂಡರು. ಗೋಮಾಳದಲ್ಲಿ ಮನೆ ಕಟ್ಟಲು ನೀಡಿರುವ ದಾಖಲೆ ಹಾಜರುಪಡಿಸುವಂತೆ ತಿಳಿಸಿದರು. ಈ ಹಿಂದೆ ಕಾರ್ಯನಿರ್ವಹಿಸುತ್ತದೆ ನಿರ್ವಹಿಸುತ್ತಿದ್ದ ಪಿಡಿಒ ಮಾಹಿತಿ ಪಡೆದುಕೊಂಡರು. ಸಂಬಳ ಹಾಗೂ ವಹಿವಾಟಿನ ಬಗ್ಗೆ ಸಂದೇಹ ಉಂಟಾಗಿದ್ದು, ಇವರ ವಿವಿಧ ಬ್ಯಾಂಕ್‌ನಲ್ಲಿ ಹೊಂದಿರುವ ಖಾತೆ ಹಾಗೂ ಸ್ಟೆಟ್‌ಮೆಂಟ್ ತರಸಿಕೊಡುವಂತೆ ಜಿಪಂ ಸಿಇಒ ಕೆ.ಆರ್.ನಂದಿನಿ ಅವರಿಗೆ ಸೂಚಿಸಿದರು.

ನರೇಗಾ ಯೋಜನೆಯಡಿ ಕೈಗೊಂಡಿರುವ ಕೆಲಸಗಳು, ಇಂಗು ಗುಂಡಿ, ರಸ್ತೆ ದೀಪಗಳ ಕಾಮಗಾರಿಗಳ ಕುರಿತು ಮಾಹಿತಿ ಪಡೆದುಕೊಂಡರು. ಇಂಗು ಗುಂಡಿ ಮಾಡುವುದರಿಂದ ಕೆರೆಗಳಿಗೆ ಗಲೀಜು ನೀರು ಮಿಶ್ರಣವಾಗಲು ಸಾಧ್ಯವಿಲ್ಲ. ಆದರಿಂದ ಪಂಚಾಯಿತಿಗಳು ಇಂಗು ಗುಂಡಿ ನಿರ್ಮಾಣ ಮಾಡಲು ಹೆಚ್ಚು ಒತ್ತು ನೀಡಬೇಕು ಎಂದು ಸೂಚನೆ ನೀಡಿದ ಅವರು, ಗ್ರಾಮ ಪಂಚಾಯತಿ ವ್ಯಾಪ್ತಿಯ ಜನಸಂಖ್ಯೆ, ಕುಟುಂಬ ಹಾಗೂ ಕರ ಸಂಗ್ರಹಣೆ ಮಾಡಿರುವ ಕುರಿತು ವಿವರ ಪಡೆದರು. ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಹಾಜರಿಲ್ಲದ ಹಾಗೂ ಹಲವು ದಿನದ ಹಿಂದೆಯೇ ಭೇಟಿ ನೀಡುವುದಾಗಿ ಮಾಹಿತಿ ನೀಡಿದ್ದರೂ ಸರಿಯಾಗಿ ದಾಖಲೆ ಹಾಜರು ಹಾಜರುಪಡಿಸಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್, ಲೋಕಾಯುಕ್ತ ಕಚೇರಿ ಕಾರ್ಯದರ್ಶಿ ಅರವಿಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net