

ನವದೆಹಲಿ: ದೇಶದ ಈವರೆಗಿನ ಪ್ರಧಾನಿಗಳು ಹಾಗೂ ಅವರು ದೇಶಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಒಂದೇ ವೇದಿಕೆಯಲ್ಲಿ ತಿಳಿಸಿಕೊಡುವ ಉದ್ದೇಶದಿಂದಾಗಿ ನಿರ್ಮಿಸಲಾಗಿರುವ ಅತ್ಯಾಧುನಿಕ ಮ್ಯೂಸಿಯಂ ಅನ್ನು ಏಪ್ರಿಲ್ 14 ರಂದು ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಲಿದ್ದಾರೆ.
ದೆಹಲಿಯ ತೀನ್ ಮೂರ್ತಿ ಭವನದಲ್ಲಿ ಮ್ಯೂಸಿಯಂ ಲೋಕಾರ್ಪಣೆಗೆ ಸಜ್ಜುಗೊಂಡಿದೆ. 10,491 ಚದರ ವಿಸ್ತೀರ್ಣದಲ್ಲಿ ಸಂವಾದಾತ್ಮಕ ಕಿಯೋಸ್ಕ್, ಪರದೆಗಳು, ಮೊಬೈಲ್ ಫೋನ್ ಅಪ್ಲಿಕೇಷನ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಎಲ್ಲಾ ಮಾಹಿತಿ ಪಡೆಯಬಹುದಾಗಿದೆ.
ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರಿಂದ ಹಿಡಿದು ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ದೇಶಕ್ಕಾಗಿ ಕೈಗೊಂಡಿರುವ ಮಹತ್ಕಾರ್ಯಗಳ ಬಗ್ಗೆ ಈ ವಸ್ತು ಸಂಗ್ರಹಾಲಯ ವಿವರಣೆಯನ್ನು ನೀಡುತ್ತದೆ. ಈ ಮ್ಯೂಸಿಯಂನಲ್ಲಿ ಎಲ್ಲಾ ಪ್ರಧಾನಿಗಳನ್ನು ಒಂದೆಡೆ ಕಣ್ತುಂಬಿಕೊಳ್ಳಬಹುದು.