ಸಂದೀಪ್ ಸಾಲ್ಯಾನ್ ಬಂಟ್ವಾಳ
ಬಿ.ಸಿ.ರೋಡು ಸುಂದರೀಕರಣ ಯೋಜನೆ ಅಂಗವಾಗಿ ಬಿ.ಸಿ.ರೋಡಿನ ಮೇಲ್ಸೇತುವೆಯ ಅಡಿಯಲ್ಲಿ ನಿರ್ಮಾಣಗೊಂಡಿರುವ ಸಾರ್ವಜನಿಕ ಶೌಚ ಹಾಗೂ ಸ್ನಾನ ಗೃಹ ಸಾರ್ವಜನಿಕರ ಬಳಕೆಗೆ ಸಿಗುತ್ತಿಲ್ಲ. ಶೌಚಗೃಹ ನಿರ್ಮಾಣಗೊಂಡು ಕೆಲವು ದಿನಗಳ ಕಾಲ ಬಾಗಿಲು ತೆರೆದಿತ್ತು. ಆ ಬಳಿಕ ಮುಚ್ಚಿದ ಬಾಗಿಲು ಮತ್ತೆ ತೆರೆದಿಲ್ಲ. ಸದ್ಯ ಶೌಚಗೃಹ ಆವರಣ ಅಲೆಮಾರಿಗಳಿಗೆ ಆಶ್ರಯತಾಣವಾಗಿದೆ.
ಸಾರ್ವಜನಿಕ ಉಪಯೋಗದ ಉದ್ದೇಶದಿಂದ ಬಿ.ಸಿ.ರೋಡು ಸುಂದರೀಕರಣ ಕಾಮಗಾರಿ ಕೈಗೆತ್ತಿಕೊಂಡ ಸಂದರ್ಭ ಸರ್ಕಾರಿ ನೌಕರರ ಸಂಘದ ಕಟ್ಟಡದ ಮುಂಭಾಗ ಫ್ಲೈ ಓವರ್‌ನ ಅಡಿಭಾಗದಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಿಸಲಾಗಿದೆ. ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚ ಹಾಗೂ ಸ್ನಾನಗೃಹದ ವ್ಯವಸ್ಥೆ ಕಲ್ಪಿಸಿ ಪಾವತಿ ವಿಧಾನದಡಿ ಬಂಟ್ವಾಳ ಪುರಸಭೆಯ ಮುಂದಾಳತ್ವದಲ್ಲಿ ಬೆಂಗಳೂರಿನ ಶುಚಿ ಇಂಟರ್ ನ್ಯಾಷನಲ್ ಸಂಸ್ಥೆಗೆ ನಿರ್ವಹಣೆಯ ಜವಾಬ್ದಾರಿ ವಹಿಸಿ ಕೊಡಲಾಗಿತ್ತು. ಸದ್ದಿಲ್ಲದೆ ಆರಂಭಗೊಂಡ ಶೌಚಗೃಹ ಹತ್ತು ದಿನ ಕಾರ್ಯನಿರ್ವಹಿಸಿ ಮತ್ತೆ ಸದ್ದಿಲ್ಲದೆ ಬಾಗಿಲು ಮುಚ್ಚಿದೆ.
ಮೇಲ್ಸೇತುವೆಯ ಕಂಬಕ್ಕೆ ಮೂತ್ರ: ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನದ ಬಳಿ ಇದ್ದ ಸಾರ್ವಜನಿಕ ಶೌಚಗೃಹವನ್ನು ಇಂದಿರಾ ಕ್ಯಾಂಟೀನ್ ನಿರ್ಮಾಣದ ಸಂದರ್ಭ ತೆರವುಗೊಳಿಸಲಾಗಿತ್ತು. ಇದರಿಂದಾಗಿ ಬಿ.ಸಿ.ರೋಡಿಗೆ ವಿವಿಧ ಕೆಲಸಗಳಿಗೆ ಬರುವ ಸಾರ್ವಜನಿಕರಿಗೆ, ಕಾರು, ರಿಕ್ಷಾ, ವ್ಯಾನು ಮತ್ತಿತರ ವಾಹನಗಳ ಚಾಲಕರಿಗೆ ತುಂಬಾ ತೊಂದರೆ ಉಂಟಾಗಿದೆ. ಬಿ.ಸಿ.ರೋಡಿನ ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕ ಶೌಚಗೃಹ ಇದ್ದರೂ ನಗರಕ್ಕೆ ಬರುವ ಎಲ್ಲರಿಗೂ ಅದನ್ನು ಬಳಕೆ ಮಾಡಲು ಸಾಧ್ಯವಿಲ್ಲ. ಇತ್ತೀಚೆಗೆ ಆರಂಭವಾದ ಪಿಂಕ್ ಟಾಯ್ಲೆಟ್ ಮಹಿಳೆಯರಿಗೆ ಮಾತ್ರ ಉಪಯೋಗವಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿರುವ ಶೌಚಗೃಹ ನಿರ್ವಹಣೆ, ಸ್ವಚ್ಛತೆ ಕೊರತೆಯಿಂದ ಹೆಚ್ಚಿನ ಜನರು ಅದನ್ನು ಬಳಸುತ್ತಿಲ್ಲ. ಆದ್ದರಿಂದ ಬಿ.ಸಿ.ರೋಡಿನ ಕೇಂದ್ರಭಾಗದಲ್ಲಿ ಸಾರ್ವಜನಿಕರಿಗೆ ಶೌಚಗೃಹ ಅನಿವಾರ್ಯವಾಗಿದೆ. ಮುಂಜಾನೆ ಹಾಗೂ ಸಂಜೆಯ ವೇಳೆ ಕೆಲವರು ಮೇಲ್ಸೇತುವೆ ಆಧಾರಕಂಬಗಳಿಗೆ ಮೂತ್ರ ವಿಸರ್ಜನೆ ಮಾಡುತ್ತಾರೆ. ಬೆಂಗಳೂರು ಮತ್ತಿತರ ಕಡೆಗಳಿಂದ ರಾತ್ರಿ, ಮುಂಜಾನೆಯ ವೇಳೆ ಬಸ್ಸಿನಲ್ಲಿ ಬರುವ ಕೆಲ ಪ್ರಯಾಣಿಕರು ತುರ್ತು ಸಂದರ್ಭದಲ್ಲಿ ಶೌಚಗೃಹ ಎಲ್ಲೂ ಕಾಣಿಸದೆ ಇದ್ದಾಗ ಮೇಲ್ಸೇತುವ ಅಡಿಭಾಗದಲ್ಲೇ ಶೌಚ ಮಾಡುವವರೂ ಇದ್ದಾರೆ.
ಅಲೆಮಾರಿಗಳ ಅಡ್ಡೆ
ಶೌಚಗೃಹ ಕಾರ್ಯಾರಂಭಗೊಳ್ಳದ ಕಾರಣ ಅದರ ಆವರಣ ಅಲೆಮಾರಿಗಳಿಗೆ ಆಶ್ರಯ ತಾಣವಾಗಿದೆ. ಶೌಚಗೃಹ ಪ್ರವೇಶ ಬಾಗಿಲಿನ ಬಳಿ ಬೇಡದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಪರಿಸರವಿಡೀ ಅಸ್ವಚ್ಛತೆ ತುಂಬಿಕೊಂಡಿದೆ. ಮುಂದಿನ ದಿನಗಳಲ್ಲಿ ಶೌಚಗೃಹ ಆರಂಭಗೊಂಡರೂ ಅದರ ಸುತ್ತಮುತ್ತಲಿನ ಪರಿಸರ ಸ್ವಚ್ಛಗೊಳಿಸುವುದೇ ದೊಡ್ಡ ಕೆಲಸವಾಗಲಿದೆ.
ನಿರ್ಜನ ಪ್ರದೇಶಗಳೆಲ್ಲ ಬಯಲು ಶೌಚ
ಸರಿಯಾದ ಸಾರ್ವಜನಿಕ ಶೌಚಗೃಹ ಬಿ.ಸಿ.ರೋಡಿನಲ್ಲಿ ಇಲ್ಲದೇ ಇರುವುದರಿಂದ ನಿರ್ಜನ ಪ್ರದೇಶಗಳೆಲ್ಲ ಮೂತ್ರಾಲಯಗಳಾಗುತ್ತಿವೆ. ಹಿಂದಿನ ಉಪನೋಂದಣಿ ಕಚೇರಿ ಸ್ಥಳಾಂತರಗೊಂಡ ಬಳಿಕ ಅದರ ಆವರಣ ಸಾರ್ವಜನಿಕ ಮೂತ್ರಾಲಯವಾಗಿದೆ. ಬಿ.ಸಿ.ರೋಡಿನ ವಿನಾಯಕ ಟಾಕೀಸ್ ಪರಿಸರ, ಬೂಡ ಕಚೇರಿ ಹಿಂಭಾಗ, ಹಳೆಯ ತಾಪಂ ಕಟ್ಟಡದ ಬಳಿಯ ಜಾಗಗಳೆಲ್ಲವೂ ಸಾರ್ವಜನಿಕರಿಗೆ ಮೂತ್ರ ವಿಸರ್ಜಿಸುವ ತಾಣವಾಗುತ್ತಿದೆ.