

ಸುಳ್ಯ: ನಗರ ಪಂಚಾಯಿತಿಯಿಂದ ಕಲ್ಚರ್ಪೆಗೆ ತ್ಯಾಜ್ಯ ಸುರಿಯುತ್ತಿದ್ದು ಅವೈಜ್ಞಾನಿಕ ನಿರ್ವಹಣೆ ನಡೆಯುತ್ತಿದೆ ಎಂದು ಆರೋಪಿಸಿ ಕಲ್ಚರ್ಪೆ ಪರಿಸರ ನಿವಾಸಿಗಳು ಮಂಗಳವಾರ ಆಲೆಟ್ಟಿ ಗ್ರಾಮಸಭೆಯಲ್ಲಿ ಪಂಚಾಯಿತಿ ಆಡಳಿತ ಮಂಡಳಿಯ ಸದಸ್ಯರನ್ನು ತರಾಟೆಗೆತ್ತಿಕೊಂಡರು.
ಈ ಕುರಿತು ಸಭೆಯಲ್ಲಿ ಇಂಜಿನಿಯರ್ ಮತ್ತು ಅಧಿಕಾರಿಗಳು ಬಂದು ಸಮರ್ಪಕವಾದ ಉತ್ತರ ನೀಡುವುದಿದ್ದರೆ ಮಾತ್ರ ನಾವು ಈ ಸಭೆಯಲ್ಲಿ ಭಾಗವಹಿಸುತ್ತೇವೆ ಎಂದು ವೇದಿಕೆಯ ಎದುರು ನೆಲದಲ್ಲಿ ಕುಳಿತು ಪರಿಸರದವರು ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಕಲ್ಚರ್ಪೆ ಸಮಸ್ಯೆ ಇಂದು ನಿನ್ನೆಯದಲ್ಲ. ಹತ್ತು ವರ್ಷಗಳಿಂದ ಇದೇ ರೀತಿ ಸುದ್ದಿಯಾಗುತ್ತಲೇ ಇದೆ. ಇದಕ್ಕೆ ಸರಿಯಾದ ವ್ಯವಸ್ಥೆ ಮಾಡಲೇಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಗ್ರಾಮಸಭೆಗೆ ಮುಂಚಿತವಾಗಿ ಪರಿಹಾರ ಆಗಬೇಕು ಎಂದು ಒತ್ತಾಯಿಸಿದರು.
ಕಲ್ಚರ್ಪೆ ವಿಚಾರವಾಗಿ ಮುಂದಿನ ದಿನಗಳಲ್ಲಿ ನಾವೆಲ್ಲರೂ ಸೇರಿ ಜಿಲ್ಲಾಧಿಕಾರಿ ಅಥವಾ ಎಸಿ ಅವರನ್ನು ಸಂಪರ್ಕಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಕರೆಸಿ, ನಪಂ ಸಮ್ಮುಖ ಮಾತುಕತೆ ನಡೆಸೋಣ. ಪರಿಸರದ ನಿವಾಸಿಗಳಿಗೆ ಯಾವುದೇ ಸಮಸ್ಯೆ ಬಾರದ ರೀತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡುವಂತೆ ಸೂಚಿಸಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷೆ ವೀಣಾ ಉತ್ತರಿಸಿದರು.
ನೋಡಲ್ ಅಧಿಕಾರಿ ಸುಹಾನ ಸಭೆಯ ಕಲಾಪ ನಡೆಸಿಕೊಟ್ಟರು. ಉಪಾಧ್ಯಕ್ಷೆ ಕಮಲ ನಾಗಪಟ್ಟಣ, ದಿನೇಶ್ ಕಣಕ್ಕೂರು, ಸತ್ಯ ಕುಮಾರ್ ಆಡಿಂಜ, ಗೀತಾ ಕೋಲ್ಚಾರು, ಚಂದ್ರಕಾಂತ್ ನಾರ್ಕೋಡು, ಸತ್ಯ ಪ್ರಸಾದ್ ಗಬ್ಬಲ್ಕಜೆ, ಶಿವಾನಂದ ರಂಗತ್ತಮಲೆ, ರದೀಶನ್ ಅರಂಬೂರು, ವೇದಾವತಿ ನೆಡ್ಡಿಲು, ಸುದೇಶ್ ಅರಂಬೂರು, ಪುಷ್ಪಾವತಿ ಕುಡೆಕಲ್ಲು, ಅನಿತಾ ಎಸ್, ಶಶಿಕಲಾ ದೋಣಿಮೂಲೆ, ಶಂಕರಿ ಕೊಲ್ಲರಮೂಲೆ, ಮೀನಾಕ್ಷಿ ಕುಡೆಕಲ್ಲು, ಕುಸುಮಾವತಿ, ಭಾಗೀರಥಿ ಪತ್ತುಕುಂಜ ಉಪಸ್ಥಿತರಿದ್ದರು.
ಮಕ್ಕಳಿಗೆ ಅನಾರೋಗ್ಯ
ಹತ್ತು ವರ್ಷಗಳಿಂದ ನಿರಂತರವಾಗಿ ಸಾಕಷ್ಟು ಕಷ್ಟ ಅನುಭವಿಸಿಕೊಂಡು ಬದುಕುತ್ತಿದ್ದೇವೆ. ಇನ್ನೂ ಕೂಡ ನಮಗೆ ಸರಿಯಾದ ವ್ಯವಸ್ಥೆ ಗ್ರಾಮ ಪಂಚಾಯಿತಿಯಿಂದಾಗಲಿ, ನಗರ ಪಂಚಾಯಿತಿಂದಾಗಲಿ ಆಗಿಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳು, ಇಲಾಖೆಯವರು ಬಂದು ಹೋಗಿರುವುದಲ್ಲದೆ ಹೇಳಿದ ರೀತಿಯಲ್ಲಿ ಯಾವುದೇ ವ್ಯವಸ್ಥೆ ಮಾಡಿಲ್ಲ. ಕಲುಷಿತ ನೀರು ಕುಡಿದು ಪರಿಸರದ ಮನೆ ಮಂದಿ, ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಆಕ್ರೋಶಭರಿತರಾದ ಕಲ್ಚರ್ಪೆ ನಿವಾಸಿಗಳಾದ ಗೋಕುಲ್ದಾಸ್, ನಾರಾಯಣ ಜಬಳೆ, ಅಶೋಕ ಪೀಚೆ, ಬಾಲಚಂದ್ರ, ರಾಧಾಕೃಷ್ಣ ಪರಿವಾರಕಾನ ಪ್ರತಿಭಟಿಸಿ ಸಭೆಯಿಂದ ಹೊರ ನಡೆದರು.