ಕುಂಭ ಸಾಧುಗಳೊಂದಿಗೆ ಅಸಂಭವ ಘಟನೆಗಳು; 15 ಸಾವಿರ ಕಿಲೋಮೀಟರ್ ಪಾದಯಾತ್ರೆ, ವಯೋವೃದ್ಧ ನಾಗರಾಜ ಶೆಟ್ಟಿ ಸಾಧನೆ

Kumbh mela
Published on

ಭಾರತದ ಆಧ್ಯಾತ್ಮಿಕ ಇತಿಹಾಸದಲ್ಲಿ ಅದೆಷ್ಟೋ ಸಾಧುಗಳ ಅನ್​ಟೋಲ್ಡ್ ಘಟನೆಗಳಿವೆ. ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಅಂತಹ ಅಸಂಖ್ಯಾತ ಸಾಧುಗಳು ಪಾಲ್ಗೊಂಡಿದ್ದಾರೆ. ಅಂತಹವರೊಂದಿಗಿನ ಅನುಭವವನ್ನು 15 ಸಾವಿರ ಕಿ.ಮೀ. ಪಾದಯಾತ್ರೆ ಮಾಡಿರುವ ಬಿ.ಎಸ್. ನಾಗರಾಜ ಶೆಟ್ಟಿ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು: ಹಿಮಾಲಯದ ಪುಣ್ಯಭೂಮಿಯಲ್ಲಿ ಅಸಂಖ್ಯಾತ ಸಾಧಕರು ಸಾಧನೆಯಲ್ಲಿ ನಿರತರಾಗಿದ್ದಾರೆ. ಸಂಕಷ್ಟದಲ್ಲಿರುವ ಯಾತ್ರಿಕರಿಗೆ ಊಹೆಗೂ ನಿಲುಕದಂತೆ ಬಂದು ಸಹಾಯ ಮಾಡಿ ಹೋಗುತ್ತಾರೆ ಎಂಬುದು ನಾಗರಾಜ ಶೆಟ್ಟಿ ಅವರ ಅನುಭವದ ಮಾತು.

ಹರಿದ್ವಾರ, ಋಷಿಕೇಶ ಮೂಲಕ ಹಿಮಾಲಯದ ಯಮುನೋತ್ರಿ, ಗಂಗೋತ್ರಿ, ಗೋಮುಖ, ತಪೋವನ, ನಂದನವನ, ಲಕ್ಷ್ಮೀವನ, ಸ್ವರ್ಗಾರೋಹಿ, ವಸುಧಾರ ಫಾಲ್ಸ್, ಸಹಸ್ರಧಾರ ಪಾಲ್ಸ್, ಬದರಿನಾಥ, ಕೇದಾರನಾಥಗಳನ್ನು ಪಾದಯಾತ್ರೆಯ ಮೂಲಕ ತಿಂಗಳುಗಟ್ಟಲೆ ಏಕಾಂಗಿಯಾಗಿ ಸಂಚರಿಸಿದ್ದಾರೆ ನಾಗರಾಜ ಶೆಟ್ಟಿ. ಬದರಿಯಿಂದ ಕೇದಾರಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಒಂದು ಹಳ್ಳವಿದ್ದು, ಅದನ್ನು ಸುತ್ತಿ ಹೋಗಲು 26 ಕಿ.ಮೀ. ಕ್ರಮಿಸಬೇಕು. ಅದನ್ನು ದಾಟಿದರೆ 3 ಕಿ.ಮೀ.ನಲ್ಲಿ ತುಂಗನಾಥ ದೇವಸ್ಥಾನ ತಲುಪಬಹುದು. ಈ ಹಳ್ಳದಲ್ಲಿ ದೇವದಾರ ಎಂಬ ಒಂದು ಜಾತಿಯ ಸಸ್ಯ ದಟ್ಟವಾಗಿ ಬೆಳೆದುಕೊಂಡ ಪರಿಣಾಮ ಹಳ್ಳದ ಅರಿವಿಲ್ಲದೆ ಇಳಿದ ನಾಗರಾಜ ಶೆಟ್ಟರಿಗೆ ಕುತ್ತಿಗೆ ವರೆಗೂ ನೀರು ಬಂದು ಮುಂದೇನು ಎಂಬುದೇ ತಿಳಿಯದಿದ್ದಾಗ ಕ್ಷಣಾರ್ಧದಲ್ಲಿ ಬಂದ ಅಜಾನುಬಾಹು ಸನ್ಯಾಸಿಯೊಬ್ಬ ಕೈಕೊಟ್ಟು ಮೇಲಕ್ಕೆ ಕರೆದುಕೊಂಡು, ‘ನಿನ್ನ ಸಮಯ ಇನ್ನೂ ಬಂದಿಲ್ಲ, ಹಳ್ಳವನ್ನು ಸುತ್ತಿಕೊಂಡೇ ಹೋಗು’ ಎಂದು ಹೇಳಿ ಕಣ್ಮರೆಯಾಗುತ್ತಾರೆ. ಅವರ ಹೆಸರು ಕೇಳಿದ್ದಕ್ಕೆ ವಿಷಕಂಠ ಎಂದು ಹೇಳುತ್ತಾರೆ. ಇವರು ಮಹಾ ಸಂತನೆಂಬುದು ನಂತರ ತಿಳಿಯುತ್ತದೆ.

ಮತ್ತೊಮ್ಮೆ ಏಕಾಂಗಿಯಾಗಿ ನಡೆದು ಹೋಗುವಾಗ ದಾರಿತಪ್ಪಿ 10 ಅಡಿ ಹಿಂದಕ್ಕೆ ಪೊದೆಯಲ್ಲಿ ಬಿದ್ದಾಗ 25ರ ಯುವ ಸನ್ಯಾಸಿ, ತಾನು ಕರ್ನಾಟಕದವನು ಎಂದು ಕೈ ಹಿಡಿದೆತ್ತಿ 3 ದಿನ ದುರ್ಗಮ ಹಾದಿ ಮುಗಿಯುವವರೆಗೂ ಜತೆಗಿದ್ದು ನಂತರ ಕಣ್ಮರೆಯಾದರು. ಮಾನಾದಿಂದ ಹೋಗುವ ದಾರಿ ಮಧ್ಯೆ ನೂರಾರು ವರ್ಷದಿಂದ ಹಿಮಗಡ್ಡೆ ಮೇಲೆ ಕುಳಿತು ತಪಸ್ಸು ಮಾಡುತ್ತಿರುವ, ಮಂಜನ್ನು ಕಿತ್ತು ಒಳಗಿರುವ ನೀರನ್ನು ಬೊಗಸೆಯಲ್ಲಿ ತಲೆಮೇಲೆ ಹಾಕಿಕೊಂಡು, ಇನ್ನೊಂದು ಬೊಗಸೆ ನೀರನ್ನು ಸಂಧ್ಯಾವಂದನೆಗೆ ಬಳಸಿ, ಮತ್ತೊಂದು ಬೊಗಸೆ ನೀರನ್ನು ಕುಡಿದು ತಪಸ್ಸಿನಲ್ಲಿ ಮಗ್ನರಾಗುವ ಮಹಾತ್ಮರಿದ್ದಾರೆ. ಹಲವು ಪವಾಡ ಸೃಷ್ಟಿಸಿರುವ ತಪೋವನಿ ಮಾತಾ ಅವರು ತಪಸ್ಸು ಮಾಡಿದ ಸ್ಥಳವಿದೆ. ಮನಸ್ಸಿನಲ್ಲಿ ಕಲ್ಮಶವಿದ್ದರೆ ಒಂದು ಹನಿ ನೀರು ಮೈಮೇಲೆ ಬೀಳದ ವಸುಧಾರ ಫಾಲ್ಸ್, ಸಾವಿರ ಕವಲುಗಳಾಗಿ ಧುಮ್ಮಿಕ್ಕುವ ಸಹಸ್ರಧಾರ ಫಾಲ್ಸ್, ಅತ್ಯದ್ಭುತವಾದ ಪುಷ್ಪಗಳು, ಸಸ್ಯ ಸಂಕುಲಗಳು, ಪುರಾಣಗಳಲ್ಲಿ ಮಾತ್ರ ಕಾಣಸಿಗುವ ಜೀವ ವೈವಿಧ್ಯತೆಗಳು ಹಿಮಾಲಯದಲ್ಲಿ ಇಂದಿಗೂ ನೋಡಲು ಸಾಧ್ಯ ಎಂದು ನಾಗರಾಜ ಶೆಟ್ಟಿ ಹೇಳುತ್ತಾರೆ.

ಪಾದಯಾತ್ರೆ ಪರ್ವ: 78 ವರ್ಷ ವಯಸ್ಸಿನ ನಾಗರಾಜ ಶೆಟ್ಟರು ಬೆಂಗಳೂರಿನ ಶ್ರೀರಾಮಪುರದಲ್ಲಿ ಹುಟ್ಟಿ ಎಲ್ಲರಂತೆ ವಿದ್ಯೆ, ಉದ್ಯೋಗ ಮಾಡಿಕೊಂಡು ಸಾಮಾನ್ಯರಂತೆ ಬದುಕುತ್ತಿದ್ದವರು. ಕುಮಾವುನ್ ಮಂಡಲ್ ವಿಕಾಸ್ ನಿಗಮದ ಮೂಲಕ ಮಾನಸ ಸರೋವರ ಕೈಲಾಸ ಯಾತ್ರೆಗೆ ಕರೆದುಕೊಂಡು ಹೋಗುವ ಮಾಹಿತಿಯನ್ನು ಪತ್ರಿಕೆಯಲ್ಲಿ ನೋಡಿದರು. ಸಂರ್ಪಸಿದಾಗ ಮೊದಲು ಸಣ್ಣಪುಟ್ಟ ಪಾದಯಾತ್ರೆ ಮಾಡಲು ಸಲಹೆ ನೀಡಿದರಂತೆ. ಅದರಂತೆ ಧರ್ಮಸ್ಥಳ, ಕೊಲ್ಲೂರು, ಶೃಂಗೇರಿ, ಶಿವಗಂಗೆ, ಮಂತ್ರಾಲಯ, ಶಿರಡಿ, ಶನಿಶಿಂಗಣಾಪುರ, ಪಂಡರಪುರ, ವರದಹಳ್ಳಿ, ಕಾಶಿ ಇತ್ಯಾದಿ ಕ್ಷೇತ್ರಗಳಿಗೆ ಹಲವು ಬಾರಿ ಹೋಗಿ ಬಂದಿದ್ದಾರೆ. 2019ರಲ್ಲಿ ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಅಮರನಾಥಕ್ಕೆ 4.5 ಸಾವಿರ ಕಿ.ಮೀ. ಪಾದಯಾತ್ರೆ ಮಾಡಿದರು. ಮಾನಸ ಸರೋವರ ಯಾತ್ರೆಯನ್ನು ಕೋವಿಡ್ ನಂತರ ನಿರ್ಬಂಧಿಸಿದ್ದು, ಆ ಕನಸು ಮಾತ್ರ್ರ ಹಾಗೇ ಉಳಿದಿದೆ. ಮಹಾಕುಂಭಕ್ಕೆ ಹೋಗುವ ಅಪೇಕ್ಷೆ ಇದ್ದರೂ ವಯೋಸಹಜ ಕಾರಣಗಳಿಂದ ಸಾಧ್ಯವಾಗಿಲ್ಲ.

ನಿಮೋಹಿಯಾಗಬೇಕು: ಲೌಕಿಕ ಜಗತ್ತಿನ ವ್ಯವಹಾರಗಳಲ್ಲಿ ತೊಡಗಿಕೊಂಡವರು ತಮ್ಮ ಕರ್ತವ್ಯಗಳು ಪೂರ್ಣಗೊಂಡ ನಂತರ ಆಸೆ ತ್ಯಜಿಸಿದರೆ ಇಂತಹ ಯಾತ್ರೆಗಳು ಸಾಧ್ಯ ಎಂಬುದು ನಾಗರಾಜ ಅವರ ಕಿವಿಮಾತು. ಕುಟುಂಬ ಸದಸ್ಯರ ಸಹಕಾರದಿಂದ ಸುದೀರ್ಘ ಪಾದಯಾತ್ರೆ ಮಾಡಿರುವ ನಾಗರಾಜ ಪತ್ನಿ ಸತ್ಯಪ್ರೇಮ ಹೇಳುವಂತೆ ಪಾದಯಾತ್ರೆಯ ನಂತರ ಪತಿ ಸದಾ ಭಗವಂತನೊಂದಿಗೆ ಮಾನಸ ಪೂಜೆಯಲ್ಲಿ ತೊಡಗಿರುತ್ತಾರಂತೆ. ತಂದೆಯ ಶಿಸ್ತು, ಧೈರ್ಯ, ಹಠ, ಲೌಕಿಕ-ಆಧ್ಯಾತ್ಮಿಕ ಎರಡೂ ಸಾಧನೆಗೆ ಕಾರಣ ಎಂದು ಪುತ್ರ ರಾಘವೇಂದ್ರ ತಿಳಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net