ಬಿಇಎಂಎಲ್‌ ಉತ್ಪಾದಿಸಿದ ಮೊದಲ ವಂದೇ ಭಾರತ್ ಸ್ಲೀಪರ್ ಟ್ರೈನ್ ಅನಾವರಣ

vande
Published on

ಬೆಂಗಳೂರು: ಬಿಇಎಂಎಲ್ ಉತ್ಪಾದಿಸಿರುವ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಅನಾವರಣಗೊಳಿಸಿದರು.

ಭಾರತದ ಮೊದಲ ವಂದೇ ಭಾರತ್ ಮಾದರಿಯ ಸ್ಲೀಪರ್ ರೈಲು ಎಂಬ ಹೆಗ್ಗಳಿಕೆ ಹೊಂದಿರುವ ರೈಲಿನ ಬೋಗಿಯನ್ನು ಸಚಿವರು ಖುದ್ದು ವೀಕ್ಷಣೆ ಮಾಡಿ, ರೈಲಿನ ವಿನ್ಯಾಸ ಮತ್ತು ಸೌಲಭ್ಯಗಳನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಅಶ್ವಿನಿ ವೈಷ್ಣವ್, ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳನ್ನು ಹಳಿಯ ಮೇಲೆ ಓಡಿಸುವ ಮುನ್ನ 10 ದಿನಗಳು ಪರೀಕ್ಷಾರ್ಥ ಸಂಚಾರ ನಡೆಸಲಾಗುವುದು. ಇನ್ನು ಮೂರು ತಿಂಗಳಲ್ಲಿ ಈ ರೈಲುಗಳು ಪ್ರಯಾಣಿಕರ ಬಳಕೆಗೆ ದೊರೆಯುವ ಸಾಧ್ಯತೆ ಇದೆ ಎಂದು ಹೇಳಿದರು.

ಜಗತ್ತಿನ ಅತ್ಯುತ್ತಮ ರೈಲುಗಳೊಂದಿಗೆ ಹೋಲಿಸಬಹುದಾದ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಸಣ್ಣ ಸಣ್ಣ ವಿಷಯಗಳಿಗೂ ಒತ್ತು ನೀಡಿ ಡಿಸೈನ್ ಮಾಡಲಾಗಿದೆ. ಲೊಕೊ ಪೈಲಟ್‌ಗಳು, ನಿರ್ವಹಣಾ ಸಿಬ್ಬಂದಿಗಳ ಅಗತ್ಯತೆಗಳಿಗೂ ಆದ್ಯತೆ ನೀಡಲಾಗಿದೆ. ಶೌಚಾಲಯವನ್ನು ವಿಶೇಷವಾಗಿ ಡಿಸೈನ್ ಮಾಡಲಾಗಿದೆ.

ಟಿಕೆಟ್ ದರ ಸಾಮಾನ್ಯ ಪ್ರಯಾಣಿಕರ ಕೈಗೆಟುಕುವಂತಿರಲಿದ್ದು, ಮಧ್ಯಮ ವರ್ಗದವರೂ ಕೂಡ ಪ್ರಯಾಣಿಸಬಹುದಾಗಿದೆ. ಸುರಕ್ಷತೆಗೆ ಹೆಚ್ಚಿನ ಗಮನ ನೀಡಿರುವುದು ಈ ರೈಲಿನ ವಿಶೇಷ. ಎಂದು ಅಶ್ವಿನಿ ವೈಷ್ಣವ್ ವಿವರಿಸಿದರು.

ರೈಲು ಅನಾವರಣದ ನಂತರ ನಡೆದ ಪರೀಕ್ಷಾರ್ಥ ಸಂಚಾರದಲ್ಲಿ ಅಶ್ವಿನಿ ವೈಷ್ಣವ್‌ರವರಿಗೆ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಸಾಥ್ ನೀಡಿದರು. ಈ ಸಂದರ್ಭದಲ್ಲಿ ರೈಲ್ವೇ ಮಂಡಳಿ ಅಧ್ಯಕ್ಷ ಸತೀಶ್ ಕುಮಾರ್, ಬಿಇಎಂಎಲ್ ಸಿಎಂಡಿ ಶಂತನು ರಾಯ್ ಹಾಗೂ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ವೇಳೆ ರೈಲ್ವೇ ತರಭೇತಿ ಸಂಸ್ಥೆಗೆ ಭೇಟಿ ನೀಡಿದ ಅಶ್ವಿನಿ ವೈಷ್ಣವ್ ಶಿಕ್ಷಣಾರ್ಥಿಗಳೊಂದಿಗೆ ಚರ್ಚೆ ನಡೆಸಿ ಅವರ ಬಹುದಿನಗಳ ಬೇಡಿಕೆಗಳನ್ನು ಪೂರೈಸಲು ಕ್ರಮಕೈಗೊಂಡರು.

ವಂದೇ ಭಾರತ್ ಸ್ಲೀಪರ್ ವಿಶೇಷತೆ

ವಂದೇ ಭಾರತ್ ಸ್ಲೀಪರ್ ಕೋಚ್‌ನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮೊಬೈಲ್ ಹೋಲ್ಡರ್, ಪ್ರತ್ಯೇಕ ಚಾರ್ಜಿಂಗ್ ಪಾಯಿಂಟ್, ಸ್ನ್ಯಾಕ್ಸೃ್ ಟೇಬಲ್, ಅಪಘಾತ ನಿಯಂತ್ರಕ ಕವಚ, ಉಕ್ಕಿನಿಂದ ನಿರ್ಮಿಸಲಾದ ಕೋಚ್‌ಗಳು, ಜಿಎಫ್‌ಆರ್‌ಪಿ ಬಳಸಿ ನಿರ್ಮಿಸಿದ ಆಂತರಿಕ ಫಲಕ, ಅಗ್ನಿ ಅವಘಡ ನಿಯಂತ್ರಣಕ್ಕೆ ಪ್ರತ್ಯೆಕ ತಂತ್ರಜ್ಞಾನ, ಸ್ವಯಂ ಚಾಲಿತ ಬಾಗಿಲುಗಳನ್ನು ಅಳವಡಿಸಲಾಗಿದೆ.

ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸಲಿರುವ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಒಟ್ಟು 16 ಬೋಗಿಗಳಿದ್ದು, 823 ಬರ್ತ್‌ಗಳಿವೆ.

ಪ್ರಥಮ ದರ್ಜೆ ಎಸಿ 1 ಬೋಗಿ, ದ್ವಿತೀಯ ದರ್ಜೆ ಎಸಿ 4 ಬೋಗಿ ಹಾಗೂ ತೃತೀಯ ದರ್ಜೆ ಎಸಿ 11 ಬೋಗಿಗಳು ಈ ರೈಲಿನಲ್ಲಿವೆ.

ವಂದೇ ಭಾರತ್ ಸ್ಲೀಪರ್ ಕೋಚ್‌ಗಳು ಬೆಂಗಳೂರಿನಲ್ಲಿರುವ ಬಿಇಎಂಎಲ್ ಉತ್ಪಾದನಾ ಘಟಕದಲ್ಲಿ ತಯಾರಾಗುತ್ತಿದ್ದು, ಇಂದು ಅನಾವರಣಗೊಂಡ ರೈಲು ಬೋಗಿ ಕೇವಲ 9 ತಿಂಗಳಲ್ಲಿ ತಯಾರಿಸುವ ಮೂಲಕ ಬಿಇಎಂಎಲ್ ಗಮನಾರ್ಹ ಸಾಧನೆ ಮಾಡಿದೆ.

ವಂದೇ ಭಾರತ್ ಸ್ಲೀಪರ್ ರೈಲು ಉತ್ಪಾದನೆ ಭಾರತದ ಸಾರಿಗೆ ಕ್ಷೇತ್ರದ ಮೈಲುಗಲ್ಲು. ಈ ಕಾರ್ಯವನ್ನು ಮಾಡಿರುವ ಬಿಇಎಂಎಲ್ ಈ ಮೂಲಕ ತನ್ನ 6 ದಶಕದ ಕಾರ್ಯಕ್ಷಮತೆಯನ್ನು ವಿಶ್ವಮಟ್ಟದಲ್ಲಿ ಸಾಭೀತು ಪಡಿಸಿದೆ. ನೂತನ ಮಾದರಿಯ ರೈಲು ಬೋಗಿ ಉತ್ಪಾದನೆಯಲ್ಲಿ ಬಿಇಎಂಎಲ್ ಗುಣಮಟ್ಟ ಮತ್ತು ನಿಖರತೆಗೆ ವಿಶೇಷ ಒತ್ತು ನೀಡಿದೆ.

-ಶಂತನು ರಾಯ್, ಬಿಇಎಂಎಲ್ ಸಿಎಂಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net