ಬಂದ್ ಹಿಂಪಡೆದ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ : ನಿಟ್ಟುಸಿರು ಬಿಟ್ಟ ಪ್ರಯಾಣಿಕರು

h8-Bandh 14
Published on

ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿಯೋಜನೆಯನ್ನು ಖಾಸಗಿ ಸಾರಿಗೆಗಳಿಗೂ ವಿಸ್ತರಿಸಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕ್ಕೆಗಾಗಿ ಆಗ್ರಹಿಸಿ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಕರೆ ನೀಡಿದ್ದ ‘ಬೆಂಗಳೂರು ಬಂದ್’ ಸಣ್ಣಪುಟ್ಟ ಘಟನೆಗಳು ಹೊರತುಪಡಿಸಿದರೆ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿತು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಪ್ರತಿಭಟನಾ ಸ್ಥಳಕ್ಕೆ ತೆರಳಿ ಖಾಸಗಿ ಸಾರಿಗೆಯವರ ಬಹುತೇಕ ಭರವಸೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಬಂದ್ ಅನ್ನು ವಾಪಸ್ ಪಡೆಯಲಾಯಿತು. ಹೀಗಾಗಿ ಬಂದ್ ಮಧ್ಯಾಹ್ನ ಹೊತ್ತಿಗೆ ಮುಕ್ತಾಯಗೊಂಡಿತ್ತು. ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟವು ಬಂದ್ ಹಿಂಪಡೆದ ಹಿನ್ನೆಲೆಯಲ್ಲಿ ಮಧ್ಯಾಹ್ನ ಮೂರು ಗಂಟೆಯ ನಂತರ ನಗರದಲ್ಲಿ ಖಾಸಗಿ ವಾಹನಗಳ ಸಂಚಾರ ಪ್ರಾರಂಭವಾದವು. ಇದರಿಂದಾಗಿ ಪ್ರಯಾಣಿಕರು ಕೊಂಚ ನಿಟ್ಟುಸಿರು ಬಿಟ್ಟರು.
ಪ್ರತಿಭಟನಾ ಮೆರವಣಿಗೆ:
ನಗರದ ನಾಲ್ಕು ದಿಕ್ಕುಗಳಿಂದ ಬೃಹತ್ ರ‌್ಯಾಲಿಯಲ್ಲಿ ಆಗಮಿಸಿದ ಖಾಸಗಿ ಸಾರಿಗೆ ಸಂಘಟನೆಗಳ ಸಾವಿರಾರು ಸದಸ್ಯರು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಸಮಾವೇಶಗೊಂಡು ಅಲ್ಲಿಂದ ಫ್ರೀಡಂಪಾರ್ಕ್‌ವರೆಗೆ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿ ಸರ್ಕಾರದ ವಿರುದ್ಧ ೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ೧೦ ಸಾವಿರಕ್ಕೂ ಹೆಚ್ಚಿನ ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನಗರದ ಸ್ವಾತಂತ್ರ್ಯ ಉದ್ಯಾನವನಕ್ಕೆ ಮಧ್ಯಾಹ್ನ ೨.೩೦ ರ ಸುಮಾರಿಗೆ ಭೇಟಿ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಭಟನಾ ನಿರತರ ಅಹವಾಲುಗಳನ್ನು ಆಲಿಸಿದ್ದರು. ಆರ್ಥಿಕ ಇಲಾಖೆಗೆ ಸಂಬಂಧಿಸಿದ ಬೇಡಿಕೆಗಳನ್ನು ಹೊರತುಪಡಿಸಿ ಉಳಿದವುಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ ಬಳಿಕ ಮುಷ್ಕರವನ್ನು ಹಿಂಪಡೆಯಲಾಯಿತು.
ಪ್ರಯಾಣಿಕರ ಪರದಾಟ:
ಲಕ್ಷಾಂತರ ಆಟೋಗಳು, ಟ್ಯಾಕ್ಸಿ ಮತ್ತು ಕ್ಯಾಬ್‌ಗಳು ರಸ್ತೆಗಿಳಿಯದೆ ಪರಿಣಾಮ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು. ಭಾನುವಾರ ಮಧ್ಯರಾತ್ರಿ ೧೨ ರಿಂದಲೇ ಖಾಸಗಿ ಸಾರಿಗೆ ಬಂದ್ ಆದ್ದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಯಿತು. ೩೨ಕ್ಕೂ ಹೆಚ್ಚು ಸಂಘಟನೆಗಳ ೭ ಲಕ್ಷಕ್ಕೂ ಹೆಚ್ಚು ಖಾಸಗಿ ವಾಹನಗಳು ರಸ್ತೆಗೆ ಇಳಿದಿರಲಿಲ್ಲ. ಶಾಲಾ-ಕಾಲೇಜುಗಳ ಮಕ್ಕಳನ್ನು ಕರೆದೊಯ್ಯುವ ಬಸ್‌ಗಳ ಚಾಲಕರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಹಲವೆಡೆ ಶಾಲಾ ಮಕ್ಕಳಿಗೆ ತೊಂದರೆಯಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಮೆಜೆಸ್ಟಿಕ್, ಯಶವಂತಪುರ ಬಸ್ ನಿಲ್ದಾಣ, ಕೆಂಗೇರಿ ಬಸ್ ನಿಲ್ದಾಣ, ಶಿವಾಜಿನಗರ, ಎಲೆಕ್ಟ್ರಾನಿಕ್ ಸಿಟಿ, ಮಡಿವಾಳ ಸೇರಿ ವಿವಿಧ ಬಸ್ ನಿಲ್ದಾಣಗಳಲ್ಲಿ ಆಟೋಗಳಿಗಾಗಿ ಪ್ರಯಾಣಿಕರು ಕಾಯುತ್ತಿದ್ದ ದೃಶ್ಯ ಕಂಡುಬಂತು. ಮತ್ತೊಂದೆಡೆ ಏರ್‌ಪೋರ್ಟ್‌ಗೆ ಬಂದಿಳಿದ ಪ್ರಯಾಣಿಕರು ಟ್ಯಾಕ್ಸಿಗಳಿಲ್ಲದೇ ಪರದಾಡಿದರು.

ಕಲ್ಲು ತೂರಾಟ, ಮೊಟ್ಟೆ ಎಸೆದ ಕಿಡಿಗೇಡಿಗಳು:
ಬಂದ್ ಬೆಂಬಲ ವ್ಯಕ್ತಪಡಿಸದೆ ರಸ್ತೆಗಿಳಿದ ಟ್ಯಾಕ್ಸಿ,ಆಟೋಗಳ ಮೇಲೆ ಹಲವೆಡೆ ಕಲ್ಲು ತೂರಾಟ ನಡೆಸಲಾಗಿದೆ. ಭಾನುವಾರ ತಡರಾತ್ರಿ ಏರ್‌ಪೋರ್ಟ್ ಟ್ಯಾಕ್ಸಿ ಮೇಲೆ ಕಲ್ಲು ತೂರಿದ್ದರಿಂದ ಅದರ ಗಾಜು ಪುಡಿಪುಡಿಯಾಗಿದೆ. ಬೆಳಗ್ಗೆ ಮೌರ್ಯ ಸರ್ಕಲ್ ಬಳಿ ರ‌್ಯಾಪಿಡೋ ಬೈಕ್ ಸವಾರನ ಮೇಲೆ ಹಲ್ಲೆ ನಡೆಲಾಗಿದೆ. ರೆಸಿಡೆನ್ಸಿ ರಸ್ತೆಯಲ್ಲಿ ಇನ್ನೋವಾ ಕಾರ್‌ನ ಟೈಯರ್‌ಗೆ ಚಾಕು ಇರಿದು ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಲಾಯಿತು. ಬೊಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ರ‌್ಯಾಪಿಡೋ ಬೈಕ್ ಬುಕ್ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಬೈಕ್ ಸವಾರನ ಹೆಲ್ಮೆಟ್ ಹೊಡೆದು ಹಾಕಿ ಆತನ ಹಲ್ಲೆ ಮಾಡಲಾಯಿತು. ಮೌರ್ಯ ಸರ್ಕಲ್ ಬಳಿ ಚಾಲಕನ ಕಾರಿನ ಕೀ ಕಿತ್ತುಕೊಂಡರು. ಚಾಲಕ ಕಾಲಿಗೆ ಬಿದ್ದರು ಬಿಡದೆ ಆತನ ಮೇಲೆ ಹಲ್ಲೆ ಮಾಡಲಾಯಿತು. ಸಂಗೊಳ್ಳಿ ರಾಯಣ್ಣ ಸಮೀಪದ ಫ್ಲೇ ಓವರ್ ಮೇಲೆ ಹೋಗುತ್ತಿದ್ದ ಸವಾರ ಮತ್ತು ಹಿಂಬದಿ ಸವಾರನ ಮೇಲೆ ಹಲ್ಲೆ ಮಾಡಲಾಯಿತು. ಎಸ್.ಪಿ ರಸ್ತೆಯಲ್ಲಿ ಹೋಗುತ್ತಿದ್ದ ಗೂಡ್ಸ್ ವಾಹನವನ್ನು ತಡೆದು, ಚಕ್ರದ ಗಾಳಿ ತೆಗೆಯಲಾಯಿತು. ಹೆಬ್ಬಾಳದಲ್ಲಿ ಹೋಗುತ್ತಿದ್ದ ಕ್ಯಾಬ್ ಮೇಲೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಲಾಯಿತು. ಮಡಿವಾಳ ಅಂಡರ್ ಪಾಸ್‌ನಲ್ಲಿ ರ‌್ಯಾಪಿಡೋ ಬೈಕ್ ಜಖಂಗೊಳಿಸಿ ಸವಾರನ ಮೇಲೆ ಹಲ್ಲೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net