

ಶಿವಮೊಗ್ಗ: ಯಾವುದೇ ವಿಚಾರವಾಗಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹೊಂದಾಣಿಕೆ ಇರಲೇಬೇಕು. ಆದರೆ, ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಾನವೀಯತೆಯನ್ನೇ ಮರೆತಿದೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಎಂದು ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕೇಳುತ್ತಿರುವುದು ಬಡವರ ಹೊಟ್ಟೆಗೆ ಅನ್ನ ಹೊರತು ಬೇರೇನು ಅಲ್ಲ. ನಾವು ಬೇರೆ ಯಾವುದೇ ಬ್ಯುಸಿನೆಸ್ ಮಾಡುತ್ತಿಲ್ಲ. ಈಗ ನೋಡಿದರೆ 15 ಕೆಜಿ ಅಕ್ಕಿ ಕೊಡಿ ಅಂತಿದ್ದಾರೆ. ಆಡಳಿತ ಪಕ್ಷದ ವಿರುದ್ಧ ಎತ್ತಿಕಟ್ಟುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸೋತಾಗ ಸಹಜವಾಗಿ ಎಲ್ಲರೂ ಅದನ್ನೇ ಮಾಡುತ್ತಾರೆ. ಬಿಜೆಪಿ ಕೂಡ ಅದನ್ನೇ ಮಾಡುತ್ತಿದೆ. ಜನರೂ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದರು.
ಗ್ಯಾರಂಟಿ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. 10 ಕೆಜಿ ಕೊಟ್ಟೇ ಕೊಡುತ್ತೇವೆ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತೇವೆ ಎನ್ನುವುದು, ಆನಂತರ ಕೊಡಲ್ಲ ಅನ್ನುವುದು. ಇದನ್ನೆಲ್ಲ ಗಮನಿಸಿದರೆ ಪ್ರತಿ ಯೋಜನೆಯಲ್ಲೂ ದ್ವೇಷದ ರಾಜಕಾರಣ ಕಾಣಿಸುತ್ತಿದೆ. ಕೇಂದ್ರಕ್ಕೆ 3 ಲಕ್ಷ ಕೋಟಿ ರೂ. ಜಿಎಸ್‌ಟಿ ತೆರಿಗೆ ರಾಜ್ಯದಿಂದಲೇ ಹೋಗುತ್ತದೆ. ಆದರೆ ಅವರು ನಮಗೆ 50ರಿಂದ 60 ಸಾವಿರ ಕೋಟಿ ರೂ. ಕೊಡುತ್ತಾರೆ. ನಮ್ಮಿಂದ ಬಹುಪಾಲು ತೆರಿಗೆ ಪಡೆದುಕೊಳ್ಳುತ್ತಾರೆ. ಕೇಂದ್ರಕ್ಕೆ ಇಷ್ಟು ಜಿಎಸ್‌ಟಿ ಕೊಡುವಾಗ ಅವರಿಗೂ ಮಾನವೀಯತೆ ಇರಬೇಕಲ್ವಾ ಎಂದು ಕಿಡಿಕಾರಿದರು.
ಗೆದ್ದಿರುವ 25 ಜನ ಸಂಸದರು ಏನು ಮಾಡುತ್ತಿದ್ದಾರೆ. ನಮ್ಮ ಪಾಲು ಹೋಗಿ ಯಾವಾಗಾದ್ರೂ ಕೇಳಿದ್ದಾರಾ ?, ನಾವು ಇಷ್ಟು ಕೊಟ್ಟಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕೇಳಲಿ. ಜನ ಆಗ ಇವರಿಗೆ ಗೌರವ ಕೊಡುತ್ತಾರೆ. ಇಲ್ಲಿ ಬಂದು ಪ್ರತಿಭಟನೆ ಮಾಡುವವರು ಮೋದಿ ಅವರ ಮನೆ ಮುಂದೆ ಯಾವಾಗಾದ್ರೂ ಮಾಡಿದ್ದಾರಾ ? ಇಲ್ಲಿ ಬಂದು ಅಕ್ಕಿ ವಿಚಾರವಾಗಿ ಮಾತಾಡುತ್ತಾರೆ. ಲೆಕ್ಕ ಕೇಳುತ್ತಾರೆ. ಅಕ್ಕಿಗೂ ಮೋಸ ಮಾಡಿ, ಜನರನ್ನೂ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೆಟ್ಟ ಬುದ್ದಿಯನ್ನು ನಿಲ್ಲಿಸಿ, ಇನ್ನಾದರೂ ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಮನವಿ ಮಾಡಿದರು.