ಕೇಂದ್ರ ಬಜೆಟ್​ 2023: ಆಯವ್ಯಯ​ ಮಂಡನೆಗೆ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ

Budget Approval
Published on

ನವದೆಹಲಿ: ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರಿಂದು ತಮ್ಮ 5ನೇ ಬಜೆಟ್​ ಮಂಡಿಸಲಿದ್ದು, ಅದಕ್ಕೂ ಮುನ್ನ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಪಡೆದುಕೊಂಡರು.

ಪ್ರಧಾನಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ನಿರ್ಮಲಾ ಸೀತಾರಾಮನ್​ ಅವರು ಬಜೆಟ್​ ಮಂಡನೆಗೆ ಅನುಮೋದನೆ ಪಡೆದುಕೊಂಡರು. ಇಂದು ಬೆಳಗ್ಗೆ 11 ಗಂಟೆಗೆ ಅವರು ಬಜೆಟ್​ ಮಂಡನೆ ಮಾಡಲಿದ್ದಾರೆ.

ಬಜೆಟ್ ಮಂಡನೆ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಎಲ್ಲ ನಾಯಕರು ಹಾಜರಿದ್ದರು.

ಬಜೆಟ್​ ಅನುಮೋದನೆ ಮುನ್ನ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಬಜೆಟ್​ ಮಂಡನೆಗೆ ಔಪಚಾರಿಕ ಒಪ್ಪಿಗೆ ಪಡೆದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 10ನೇ ಪೂರ್ಣ ಪ್ರಮಾಣದ ಬಜೆಟ್​ ಇದಾಗಿದ್ದು, ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್​ ಅವರು ಮಂಡಿಸುತ್ತಿರುವ 5ನೇ ಬಜೆಟ್​ ಆಗಿದೆ. ಈ ಬಾರಿಯು ಸೂಟ್​ಕೇಸ್ ಸಂಪ್ರದಾಯವಿಲ್ಲ ಮತ್ತು ಮುದ್ರಣದ ಪ್ರತಿಗಳು ಇರುವುದಿಲ್ಲ. ಕಳೆದ ಬಾರಿಯಂತೆ ಇ ಬಜೆಟ್ ಮಂಡನೆಯಾಗಲಿದೆ. ​​ ಕಳೆದ ಬಾರಿಯಂತೆ “ಬಹಿ ಖಾತಾ” ಸಂಪ್ರದಾಯವನ್ನು ಬದಿಗಿಟ್ಟು ಟ್ಯಾಬ್​ ಮೂಲಕ ಆಯವ್ಯಯ ಮಂಡನೆ ಮಾಡಲಿದ್ದಾರೆ.

ಸದ್ಯ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ನಡುವೆ ಮಂಡನೆ ಆಗುತ್ತಿರುವ ಈ ಬಜೆಟ್​ ವಿಶ್ವದ ಗಮನ ಸೆಳೆದಿದೆ. ಹೀಗಾಗಿ ಜನರು ಕೂಡ ಬಜೆಟ್​ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, 1000 ರೂ. ದಾಟಿರುವ ಸಿಲಿಂಡರ್​ ಬೆಲೆ ಇಳಿಕೆ ಆಗಲಿದೆಯಾ? ಶತಕ ಬಾರಿಸಿರುವ ಪೆಟ್ರೋಲ್​ ದರದಲ್ಲಿ ಕೊಂಚ ನಿರಾಳ ಕಾಣಬಹುದಾ? ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆ ಕಡಿಮೆ ಆಗಲಿದೆಯಾ? ಬೀಜ ಗೊಬ್ಬರ ಖರೀದಿಯಲ್ಲಿ ಸಬ್ಸಿಡಿ ಸಿಗುತ್ತಾ? ಈ ಬಾರಿ ಆದಾಯ ತೆರಿಗೆ ಮಿತಿಯನ್ನು ಸರ್ಕಾರ ಹೆಚ್ಚಿಸುತ್ತಾ? ಯಾವುದು ಇಳಿಕೆ ಯಾವುದು ಏರಿಕೆ? ಜನರಿಗೆ ಪ್ರಧಾನಿ ಮೋದಿ ಕೊಡ್ತಾರಾ ಗುಡ್ ನ್ಯೂಸ್? ಎಂಬಿತ್ಯಾದಿ ಪ್ರಶ್ನೆಗಳಿಗೆ ಇಂದಿನ ಬಜೆಟ್​ನಲ್ಲಿ ಉತ್ತರ ಸಿಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net