

ವಿಜಯವಾಣಿ ಸುದ್ದಿಜಾಲ ಹಂಗಾರಕಟ್ಟೆ
ಹಂಗಾರಕಟ್ಟೆ ಬಾರ್ಜ್ನಲ್ಲಿ ಸಂಚರಿಸುವ ಸ್ಥಳೀಯ ಪ್ರಯಾಣಿಕರಿಗೆ ಹಾಗೂ ವಾಹನಗಳಿಗೆ ಟಿಕೆಟ್ ನೀಡದೆ ಅವ್ಯವಹಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಾಗರಿಕರು ಭಾನುವಾರ ಪ್ರತಿಭಟಿಸಿದ್ದಾರೆ.
ಬಾರ್ಜಿನ ದುರಸ್ತಿ ಕುರಿತು ಪ್ರಶ್ನಿಸಿ ಹಂಗಾರಕಟ್ಟೆ ಬಂದರಿನಲ್ಲಿ ಸ್ದಳೀಯರ ಮತ್ತು ಬಾರ್ಜ್ನ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಾರ್ಜ್ ಮಾರ್ಜಿನ್ ಸಿಬ್ಬಂದಿ ಮೂರು ತಿಂಗಳಿನಿಂದ ಹಂಗಾರಕಟ್ಟೆಯಿಂದ ಕೋಡಿಬೆಂಗ್ರೆಗೆ ತೆರಳುವ ಪ್ರಯಾಣಿಕರಿಗೆ , ವಾಹನಗಳಿಗೆ ಟಿಕೆಟ್ ನೀಡಿಲ್ಲ ಎಂದು ಸ್ಥಳೀಯರ ಆಕ್ಷೇಪಿಸಿದ್ದಾರೆ. ಬಾರ್ಜ್ ಅಧಿಕಾರಿ ಹಾಗೂ ಸಿಬ್ಬಂದಿ ಉಡಾಫೆಯಿಂದ ಪ್ರತಿಕ್ರಿಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ.
ಸ್ಥಳಕ್ಕಾಗಮಿಸಿದ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಹಾಗೂ ಕೋಡಿ ಬೆಂಗ್ರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಸಾದ್ ತಿಂಗಳಾಯ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಬಳಿಕ ಬಂದರು ಒಳನಾಡು ಹಾಗು ಜಲಸಾರಿಗೆ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದು, ಅಲ್ಲಿಯವರೆಗೆ ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ಯಥಾಸ್ಥಿತಿಯಲ್ಲಿ ಬಾರ್ಜ್ ಸೇವೆ ಮುಂದುವರಿಸುವಂತೆ ಬಾರ್ಜ್ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ. ಹೋರಾಟದ ಪ್ರಮುಖರಾದ ದೀಕ್ಷಿತ್ ಡಿಸೋಜ, ಮೋಹನ್ ಬಂಗೇರ, ಆಶಿಕ್ ಪೂಜಾರಿ, ಸತೀಶ್, ಶಾಹಿದ್, ಆನಂದ್ ಉಪಸ್ಥಿತರಿದ್ದರು.
ಬಾರ್ಜ್ ಸಿಬ್ಬಂದಿ ಪ್ರಯಾಣಿಕರೊಂದಿಗೆ ಸಾವಧಾನದಿಂದ ವರ್ತಿಸಿ ಬಾರ್ಜ್ ಮೇಲೆ ಸಾಗುವಂತಹ ವಾಹನಗಳಿಗೆ ಟಿಕೆಟ್ ಕೊಟ್ಟು ಮತ್ತು ಬಾರ್ಜ್ ದುರಸ್ತಿ ಸರಿಪಡಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ವ್ಯವಸ್ಥಿತವಾಗಿ ಸಾರ್ವಜನಿಕರಿಗೆ ಸೇವೆ ದೊರಕುವಂತಾಗಬೇಕು. -ಮೋಹನ್ ಬಂಗೇರ ಹಂಗಾರಕಟ್ಟೆ https://www.vijayavani.net/woman-is-educated-the-country-is-strong https://www.vijayavani.net/honoring-the-disabled-at-airodi