ಅಭಿವೃದ್ಧಿಗೊಳ್ಳದ ಶಾಲೆಗಳೇ ಅಧಿಕ! : ಬೆಳ್ತಂಗಡಿ ತಾಲೂಕಿನ ಸರ್ಕಾರಿ ವಿದ್ಯಾಮಂದಿರಗಳ ದುಸ್ಥಿತಿ : ಶಿಕ್ಷಣದಲ್ಲಿ ಪೈಪೋಟಿ, ವ್ಯವಸ್ಥೆಯಲ್ಲಿ ಲೋಪ :ರಿಪೇರಿ ಕಾರ್ಯಕ್ಕೆ ಅನುದಾನದ ಕೊರತೆ

New Project (13)
Published on

ಮನೋಹರ್ ಬಳಂಜ ಬೆಳ್ತಂಗಡಿ

ತಾಲೂಕಾದ್ಯಂತ ಇರುವ ಬಹುತೇಕ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಯ ಶಿಕ್ಷಣ ಗುಣಮಟ್ಟಕ್ಕೆ ಪೈಪೋಟಿ ನೀಡುವಷ್ಟು ಉತ್ತಮವಿದೆ. ಆದರೆ ಅಂತಹ ಶಾಲೆಗಳಲ್ಲಿ ಇನ್ನೂ ಮೂಲಸೌಕರ್ಯಗಳೇ ಇಲ್ಲದಿರುವುದು ವಿಪರ್ಯಾಸ.

ಬೆಳ್ತಂಗಡಿ ತಾಲೂಕಿನಲ್ಲಿ 214 ಸರ್ಕಾರಿ ಶಾಲೆಗಳಿದ್ದು, ಈ ಪೈಕಿ 34 ಪ್ರೌಢಶಾಲೆಗಳು, 172 ಪ್ರಾಥಮಿಕ ಶಾಲೆ, 6 ಆರ್‌ಎಂಎಸ್, 9 ಅನುದಾನಿತ ಪ್ರೌಢಶಾಲೆ, 16 ಅನುದಾನಿತ ಪ್ರಾಥಮಿಕ ಶಾಲೆಗಳಾಗಿವೆ. ಕಳೆದ ಸಾಲಿನಲ್ಲಿ 90 ಲಕ್ಷ ರೂ. ಅನುದಾನದಲ್ಲಿ 90 ಶಾಲೆಗಳ ಮೂಲಸೌಕರ್ಯ ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ 64 ಶಾಲೆಗಳಷ್ಟೇ ಅಭಿವೃದ್ಧಗೊಂಡಿವೆ.

ನಿಷ್ಪ್ರಯೋಜಕ ಟೆಂಡರ್: 2024-25ರ ಅನುದಾನದಲ್ಲಿ 63 ಶಾಲೆಗಳ ಕಟ್ಟಡವನ್ನು ದುರಸ್ತಿಗೊಳಿಸಲಾಗಿದೆ. ಉಜಿರೆ ಬದುಕು ಕಟ್ಟೋಣ ತಂಡದಿಂದ ಲಾಲ ಕರ್ನೋಡಿ, ಉಜಿರೆ ಹಳೆಪೇಟೆ, ಕಲ್ಮಂಜ, ಪೆರ್ಲ ಬಪಾಡಿ ಸೇರಿ ಏಳು ಶಾಲೆಗಳನ್ನು ಸ್ವಂತ ನಿಧಿ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶಾಲೆ ಪುನರುಜ್ಜೀವನಗೊಳಿಸಲಾಗಿದೆ. 30 ವರ್ಷಕ್ಕೂ ಹಳೇ ಶಾಲೆಗಳ ಮೇಲ್ಛಾವಣಿ ಅಡ್ಡಹಾಸು ರಿಪೇರಿಯಾಗಬೇಕಿದ್ದು, ಟೆಂಡರ್ ಕರೆದರೂ ಪೂರ್ಣ ರೂಪದಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಜತೆಗೆ ಸರ್ಕಾರದಿಂದ ದೊರೆಯುವ ಅನುದಾನ ಸಾಲುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ.

ಶಾಸಕರಿಂದ ಸ್ಥಳಾಂತರಕ್ಕೆ ಸೂಚನೆ: ಬೆಳ್ತಂಗಡಿ ತಾಲೂಕು ಆಡಳಿತ ಹಾಗೂ ತಾ.ಪಂ ವತಿಯಿಂದ ಶಾಸಕ ಹರೀಶ್ ಪೂಂಜ ಅಧ್ಯಕ್ಷರೆಯಲ್ಲಿ ಇತ್ತೀಚೆಗೆ ಸಭೆ ನಡೆದಿತ್ತು. ಈ ವೇಳೆ ದುರಸ್ತಿ ಅಗತ್ಯವಿರುವ ಶಾಲೆಗಳ ಪಟ್ಟಿ ತಯಾರಿಸಿ ಪಂಚಾಯತ್‌ರಾಜ್ ಇಲಾಖೆ ವತಿಯಿಂದ ಫಿಸಿಕಲ್ ಸರ್ಟಿಫಿಕೆಟ್ ಪಡೆದ ಕಟ್ಟಡದಲ್ಲಿ ಮಾತ್ರ ವಿದ್ಯಾರ್ಥಿಗಳ ಕುಳ್ಳಿರಿಸಬಹುದು ಎಂದು ನಿರ್ಧರಿಸಲಾಗಿತ್ತು. ಕಟ್ಟಡ ಗುಣಮಟ್ಟ ತಿರಸ್ಕೃತಗೊಂಡರೆ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆಯೇ ದೊಡ್ಡ ತಲೆ ನೋವಾಗಿದೆ.

ಅನುದಾನ ಅಗತ್ಯವುಳ್ಳ ಶಾಲೆಗಳು

ಅರಸಿನಮಕ್ಕಿ ಪ್ರೌಢಶಾಲೆ, ಪಡಂಗಡಿ ಪ್ರೌಢಶಾಲೆ, ನಿಡ್ಲೆ ಸ.ಪ್ರೌ.ಶಾಲೆ, ಮಚ್ಚಿನ ಹಿ.ಪ್ರಾ.ಶಾಲೆ, ಮಾಲಾಡಿ, ಕಣಿಯೂರು ಕುಪ್ಪೆಟ್ಟಿ, ಇಳಂತಿಲ, ಮುಂಡಾಜೆ ಕೊಂಬಿಕಡ್ಕ, ಮಿತ್ತಬಾಗಿಲು, ಬೆಳ್ತಂಗಡಿ, ಬೆಳಾಲು, ನಿಡ್ಲೆ ಬರೆಂಗಾಯ, ನಿಡ್ಲೆ ಬೂಡುಜಾಲು, ಅರಸಿನಮಮಕ್ಕಿ ನೇಲ್ಯಡ್ಕ, ಗುರುವಾಯನಕೆರೆ, ಕಾಪಿನಡ್ಕ, ಕಾಶಿಪಟ್ಣ, ಕೊಕ್ಕಡ ಸೌತಡ್ಕ, ತೋಟತ್ತಾಡಿ, ಮಾಲಾಡಿ, ಗುರಿಪಳ್ಳ, ಲಾಲ, ಉಜಿರೆ ಸರ್ಕಾರಿ ಶಾಲೆಗಳಲ್ಲಿ ಕೈಗೊಳ್ಳಬೇಕಿರುವ ದುರಸ್ತಿಗೆ 1 ಲಕ್ಷ ರೂ.ನಿಂದ 4 ಲಕ್ಷ ರೂ.ವರೆಗೆ ಅಂದಾಜು ಪಟ್ಟಿ ಸಲ್ಲಿಸಲಾಗಿದೆ.

ಶಾಲೆಗಳ ಕಟ್ಟಡ ಬಹುತೇಕ ಸುರಕ್ಷಿತವಾಗಿದೆ. ಈ ಹಿಂದೆ 24 ಶಾಲೆಗಳ ಅಸುರಕ್ಷತೆ ಬಗ್ಗೆ ಮಾಹಿತಿಯಿತ್ತು. ಶಾಸಕರ ಸಭೆ ಬಳಿಕ ಮತ್ತೊಮ್ಮೆ ಹೊಸ ಪಟ್ಟಿ ಪಡೆಯಲಾಗಿದೆ. 42 ಶಾಲೆಗಳಿಂದ ಬೇಡಿಕೆ ಬಂದಿವೆ. ಅವುಗಳಲ್ಲಿ ತೀರ ಸಂಕಷ್ಟಕರ ಸ್ಥಿತಿಯಲ್ಲಿ 10 ಶಾಲೆಗಳಿವೆ. ಈ ಕುರಿತು ಅನುದಾನ ತರಿಸುವಲ್ಲಿ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು. ವೆಂಕಟೇಶ್ ತುಳುಪುಳೆ, ಬೆಳ್ತಂಗಡಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಕರಿಯಾಲು ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ. ಬೆಳಾಲು ಮಾಯಾ ಸ.ಉ.ಪ್ರಾ.ಶಾಲಾ ಕಟ್ಟಡ ಅಯೋಮಯವಾಗಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net