

ನಿಮಗೋ, ನಿಮ್ಮ ಮನೆಯಲ್ಲಿನ ಹಿರಿಯರಿಗೋ ಕರೊನಾ ಸೋಂಕು ತಗುಲಿದೆಯಾ? ಕೋವಿಡ್ ಹೆಸರು ಕೇಳಿದರೇನೆ ಬೆಚ್ಚೀಬಿಳೋ ಹಾಗಾಗಿದೆಯಾ? ಸೋಂಕು ಬಂದು ಐಸೋಲೇಷನ್ ಸೆಂಟರ್ನಲ್ಲಿದ್ದು ಬೋರ್ ಆಗ್ತಿದೆಯಾ? ಯಾರೂ ಹತ್ತಿರ ಬರ್ತಿಲ್ಲ, ಮಾತಾಡ್ತಿಲ್ಲ ಅಂತ ಭಯನಾ? ಹೀಗೆ ಭಯ ಪಟ್ಟುಕೊಳ್ತಿರೋ ನಿಮ್ಮಂಥ ಮಕ್ಕಳ ಟೆನ್ಷನ್ ದೂರ ಮಾಡೋಕೆ ಬಂದಿದ್ದಾರೆ ನೋಡಿ ಇವರು...
| ಸುಚೇತನಾ ನಾಯ್ಕ
"ಆಂಟಿ... ಪ್ಲೀಸ್ ಹೆಲ್ಪ್ ಮಾಡಿ... ನನಗೆ ಐಸೋಲೇಷನ್ ಕೇಂದ್ರದಲ್ಲಿ ತುಂಬಾ ಬೇಜಾರಾಗ್ತಿದೆ, ಯಾಕೋ ಅಪ್ಪ-& ಅಮ್ಮ ರ್ಬತಾನೇ ಇಲ್ಲ. ನನ್ನ ನೋಡಲು ಬರುವಂತೆ ಅವರಿಗೆ ಹೇಳ್ತೀರಾ ಪ್ಲೀಸ್...'
"ಅಂಕಲ್ ಅಂಕಲ್... ನನಗೆ ಕರೊನಾ ಬಂದು ಗುಣವಾಗಿದೆ. ಆದ್ರೆ ಈಗ್ಯಾಕೋ ಸಿಕ್ಕಾಪಟ್ಟೆ ಸಿಟ್ಟು ಬರ್ತಿದೆ. ಯಾರನ್ನ ಕಂಡ್ರೂ ಹೊಡೆದುಬಿಡೋಣ ಅನ್ನಿಸ್ತಿದೆ, ಇದೇ ಕಾರಣಕ್ಕೆ ಎಲ್ಲರೂ ನನ್ನನ್ನು ದೂರ ಇಟ್ಟಿದ್ದಾರೆ, ನಾನ್ಯಾಕೆ ಹೀಗಾದೆ?'
"ಸರ್ ಸರ್... ಅಪ್ಪ- ಅಮ್ಮನನ್ನು ಆಸ್ಪತ್ರೆಗೆ ಕರ್ಕೊಂಡು ಹೋಗಿಬಿಟ್ರು, ಮನೇಲಿ ನಾನೊಬ್ಬನೇ ಇದೀನಿ. ತುಂಬಾ ಭಯವಾಗ್ತಿದೆ, ಏನು ಮಾಡಲಿ...?'
ಇನ್ಮುಂದೆ ಅದ್ಯಾವುದಕ್ಕೂ ಚಿಂತೆ ಮಾಡಬೇಡಿ. ಕರೊನಾದ ಸಂಕಷ್ಟದ ಈ ದಿನಗಳಲ್ಲಿ ಬಹುತೇಕ ಮನೆಗಳ ಮಕ್ಕಳು ಇಂಥದ್ದೇ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗೇನಾದ್ರೂ ನಿಮಗೆ ಕಷ್ಟಗಳಿದ್ದರೆ ಅಥವಾ ಭಯದ ವಾತಾವರಣ ಇದ್ದರೆ ನೀವು 1800- 121 -2830ಗೆ ಫೋನ್ ಮಾಡಿದರೆ ಆಯಿತು. ನಿಮಗೆ ಧೈರ್ಯ ಹೇಳಲು, ನೀವು ಈ ಸಂದರ್ಭದಲ್ಲಿ ಏನು ಮಾಡಬೇಕು ಎಂದು ತಿಳಿಸಲು ಅತ್ತ ಕಡೆಯಿಂದ ಒಬ್ಬ ಆಂಟಿಯೋ, ಅಂಕಲ್ಲೋ ರೆಡಿ ಇರುತ್ತಾರೆ.
ಎಷ್ಟು ಈಜಿ ಕೆಲಸ ಅಲ್ವಾ? ಅದ್ಹೇಗೆ ಪರಿಹಾರ ಸಿಗುತ್ತೆ ಅಂತೀರಾ? ನಿಮ್ಮಂಥ ನೊಂದ ಪುಟಾಣಿಗಳಿಗೆ ನೆರವಾಗುವ ಉದ್ದೇಶದಿಂದಲೇ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ ಸಿಪಿಸಿಆರ್) "ಸಂವೇದನಾ' ಎನ್ನುವ ಸಹಾಯವಾಣಿಯನ್ನು ಆರಂಭಿಸಿದೆ. ಇದು ಉಚಿತವಾಗಿದ್ದು, ಯಾರು ಬೇಕಾದರೂ ಇದರಲ್ಲಿ ಮಾತನಾಡಬಹುದು.
1800- 121- -2830 ಸಂಖ್ಯೆಯನ್ನು ಡಯಲ್ ಮಾಡಿದಾಗ ಅಲ್ಲಿ ಇದ್ದವರು ಕರೆ ಸ್ವೀಕರಿಸುತ್ತಾರೆ. ನಿಮ್ಮ ಸಮಸ್ಯೆ ಹೇಳಿಕೊಂಡರೆ ಅವರು ತಕ್ಷಣ ಪರಿಹಾರ ಹೇಳುತ್ತಾರೆ. ನಿಮ್ಮ ಹಾಗೆ ತುಂಬಾ ಮಕ್ಕಳಿಗೆ ತೊಂದರೆ ಇರತ್ತಲ್ವಾ? ಅದಕ್ಕಾಗಿಯೇ ಅವರೆಲ್ಲರೂ ಒಟ್ಟೊಟ್ಟಿಗೆ ಕರೆ ಮಾಡಿದಾಗ ಕೆಲವೊಮ್ಮೆ "ಬಿಜಿ' ಬರುವ ಸಾಧ್ಯತೆಯೂ ಇರುತ್ತದೆ. ಅದಕ್ಕಾಗಿ ಬೇಜಾರು ಮಾಡಿಕೊಳ್ಳದೆ ಮತ್ತೊಮ್ಮೆ ಟೆ ಮಾಡಬೇಕು. ಈ ಮೇಲೆ ಬರೆದಿರುವ ಒಂದಿಷ್ಟು ಪ್ರಶ್ನೆಗಳಿದ್ದಾವಲ್ಲ, ಅವು ಕೋವಿಡ್ನ ಈ ದಿನಗಳಲ್ಲಿ ಬೇರೆ ಬೇರೆ ರಾಜ್ಯಗಳ ಮಕ್ಕಳು ೋನ್ ಮಾಡಿ ಕೇಳಿರುವ ಪ್ರಶ್ನೆಗಳು. ಅವೆಲ್ಲಕ್ಕೂ ಅಲ್ಲಿರುವ ಆಪ್ತ ಸಮಾಲೋಚಕರು (ಅಂದರೆ ನಿಮ್ಮ ಸಮಸ್ಯೆಗಳನ್ನೆಲ್ಲಾ ಅರಿತು ಅದಕ್ಕೆ ೋನಿನಲ್ಲಿಯೇ ಸಮಾಧಾನ ಹೇಳುವ ಆಂಟಿ, ಅಂಕಲ್ಗಳು) ಇರುತ್ತಾರೆ. ಅವರೆಲ್ಲರೂ ಆ ಕ್ಷಣದಲ್ಲಿ ನೀವು ಏನು ಮಾಡಬಹುದು, ನೀವು ಒಂಟಿಯಾಗಿದ್ದರೆ ಯಾರ ಸಹಾಯ ಪಡೆಯಬಹುದು, ಐಸೋಲೇಷನ್ ಕೇಂದ್ರದಲ್ಲಿ ಬೋರ್ ಆಗ್ತಿದ್ರೆ ಯಾವೆಲ್ಲಾ ಚಟುವಟಿಕೆಗಳನ್ನು ನೀವು ಮಾಡಬಹುದು ಎಂಬ ಬಗ್ಗೆ ನಿಮಗೆ ಸಲಹೆ ನೀಡುತ್ತಾರೆ.
ಮನೆಯಲ್ಲಿ ಅಪ್ಪ- ಅಮ್ಮ ಮತ್ತು ಹಿರಿಯರು ಎಲ್ಲರಿಗೂ ಸೋಂಕು ಬಂದಿದ್ದರೆ ಅವರನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡುವುದು ಅನಿವಾರ್ಯವಾಗುತ್ತೆ. ಆ ಸಂದರ್ಭದಲ್ಲಿ ಎಷ್ಟೋ ಮಕ್ಕಳು ಒಂಟಿಯಾಗಿ ಮನೆಯಲ್ಲಿ ಇರಲೇಬೇಕಾಗುತ್ತೆ. ಇನ್ನು ನಿಮಗೆ ಸೋಂಕು ತಗುಲಿದ್ದು ಐಸೋಲೇಷನ್ ಕೇಂದ್ರದಲ್ಲಿ ಇದ್ದರೆ ಅಪ್ಪ-&ಅಮ್ಮ ಸೇರಿದಂತೆ ಯಾರನ್ನೂ ನಿಮ್ಮ ಬಳಿ ಬಿಡಲ್ಲ. ಸೋಂಕು ಎಲ್ಲರಿಗೂ ಹರಡಿಬಿಡುತ್ತೆ ಎನ್ನುವ ಭಯ. ಅಂಥ ಸನ್ನಿವೇಶ ನಿಮಗೇನಾದ್ರೂ ಬಂದರೆ ಭಯಪಡುವ ಅಗತ್ಯನೇ ಇಲ್ಲ. ಇಲ್ಲಿ ೋನಾಯಿಸಿದರೆ ನಿಮಗೆ ಒಳ್ಳೊಳ್ಳೆ ಸಲಹೆಗಳು ಸಿಗುತ್ತವೆ. ನೀವು ಅವರಿಗೆ ಬೇಕಾದ ಪ್ರಶ್ನೆ ಕೇಳಬಹುದು. ಎಲ್ಲದಕ್ಕೂ ಅವರು ನಿಮಗೆ ಸಮಾಧಾನದಿಂದ ಉತ್ತರಿಸುತ್ತಾರೆ.
ಯಾವ ಭಾಷೇಲಿ ಸಲಹೆ ಲಭ್ಯ?
ಕನ್ನಡ, ತಮಿಳು, ತೆಲುಗು, ಒರಿಯಾ, ಮರಾಠಿ, ಗುಜರಾತಿ, ಬಂಗಾಲಿ ಇತ್ಯಾದಿ ನಾನಾ ಪ್ರಾದೇಶಿಕ ಭಾಷೆಗಳಲ್ಲಿ ಸಲಹೆಗಳು ಲಭ್ಯ.
ಯಾರ್ಯಾರು ಕರೆ ಮಾಡಬಹುದು?
ಕ್ವಾರಂಟೈನ್/ ಐಸೋಲೇಷನ್/ ಕೋವಿಡ್ ಆರೈಕೆ ಕೇಂದ್ರದಲ್ಲಿರುವ ಮಕ್ಕಳು, ಪಾಲಕರನ್ನು ಕಳೆದುಕೊಂಡ ಮಕ್ಕಳು ಕಾಲ್ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು. ಜತೆಗೆ, ಕೋವಿಡ್ನಿಂದಾಗಿ ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಬಳಲಿದ್ದರೆ, ಆತಂಕಕ್ಕೆ ಈಡಾಗಿದ್ದರೆ ಇಂಥ ಯಾವುದೇ ಸಮಸ್ಯೆಗಳು ಇದ್ದರೂ ಮನೆಯಲ್ಲಿನ ದೊಡ್ಡವರು ಈ ನಂಬರ್ಗೆ ಕರೆ ಮಾಡಬಹುದು.
ಯಾವ ಟೈಂನಲ್ಲಿ ಕರೆ ಮಾಡ್ಬೇಕು?
ನೀವು ಸಹಾಯವಾಣಿ ಸಂಖ್ಯೆಗೆ ಕರೆ ಮಾಡಲು ಟೈಮಿಂಗ್ಸ್ ಫಿಕ್ಸ್ ಮಾಡಲಾಗಿದೆ. ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 8 ಗಂಟೆಯವರೆಗೆ. ಈ ಕರೆಗೆ ಶುಲ್ಕ ಇರುವುದಿಲ್ಲ. ಸಂಪೂರ್ಣ ಉಚಿತ.
ಸಲಹೆ ನೀಡೋರು ಯಾರು?
ನೀವು ಕರೊನಾ ಸಮಯದಲ್ಲಿ ಯಾವುದೇ ರೀತಿಯ ಸಂಕಷ್ಟಕ್ಕೆ ಸಿಲುಕಿದರೂ ಈ ಸಂವೇದನಾ ಕೇಂದ್ರಕ್ಕೆ ಕರೆ ಮಾಡಿದರೆ, ಅಲ್ಲಿ ಸಲಹೆ ನೀಡುವವರು
ನಿಮ್ಹಾನ್ಸ್ನ ಮಕ್ಕಳ ಮತ್ತು ಹದಿಹರೆಯದ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಶೇಖರ್ ಶೇಷಾದ್ರಿ ಮತ್ತು ಅವರ ತಂಡ. ಮಕ್ಕಳ ಒತ್ತಡ, ಆತಂಕ, ಭಯ ಹಾಗೂ ಇತರ ಸಮಸ್ಯೆಗಳನ್ನು ಆಲಿಸಿ ಮಾನಸಿಕ ಬೆಂಬಲ ನೀಡುತ್ತಾರೆ.