

ನವದೆಹಲಿ: ಇಡೀ ಜಗತ್ತನ್ನು ಕಾಡಿದ ಮಹಾಮಾರಿ ಕರೊನಾ ವೈರಸ್ ಸಂಪೂರ್ಣವಾಗಿ ನಿವಾರಣೆಯಾಗಿಲ್ಲದಿದ್ದರೂ ಅದರ ಪ್ರಭಾವ ಮಾತ್ರ ಕಡಿಮೆ ಇದೆ. ಕರೊನಾ ಬಿಕ್ಕಟ್ಟಿನ ಸಮಯದಲ್ಲಿ ಮಾಸ್ಕ್ ಎಲ್ಲರ ರಕ್ಷಾ ಕವಚವಾಗಿತ್ತು. ಎಲ್ಲಿಗೆ ಹೋಗಬೇಕಾದರೂ ಮಾಸ್ಕ್ ಪ್ರಮುಖವಾಗಿ ಬೇಕಾಗಿತ್ತು. ಮಾಸ್ಕ್ ಇಲ್ಲದೇ ಯಾರನ್ನು ಎಲ್ಲಿಗೂ ಪ್ರವೇಶ ನೀಡುತ್ತಿರಲಿಲ್ಲ. ಆರಂಭದಲ್ಲಿ ಒಂದು ರೀತಿಯಲ್ಲಿ ಕಿರಿಕಿರಿ ಆದರೂ ಜನ ಮಾಸ್ಕ್ಗೆ ಒಗ್ಗಿಬಿಟ್ಟಿದ್ದರು. ಇದೀಗ ಕರೊನಾ ದೂರವಾಗಿರುವ ಹಿನ್ನೆಲೆಯಲ್ಲಿ ಮಾಸ್ಕ್ಗೆ ಮುಕ್ತಿ ಸಿಕ್ಕಿದೆ. ಆದರೂ ಅಲ್ಲೊಬ್ಬರು, ಇಲ್ಲೊಬ್ಬರು ಮಾಸ್ಕ್ ಧರಿಸುತ್ತಲೇ ಇದ್ದಾರೆ. ಇದೀಗ ಮಾಸ್ಕ್ ಕುರಿತು ನಡೆದ ಅಧ್ಯಯನದ ಅಚ್ಚರಿಯ ಫಲಿತಾಂಶ ಬಹಿರಂಗವಾಗಿದೆ.
ತಮ್ಮನ್ನು ತಾವು ಆಕರ್ಷಣೀಯವಲ್ಲ ಎಂದು ಭಾವಿಸುವ ಹಾಗೂ ನೋಡಲು ನಾನು ಚೆನ್ನಾಗಿಲ್ಲ ಅಂತಾ ಅಂದುಕೊಳ್ಳುವ, ಸೌಂದರ್ಯದಲ್ಲಿ ಕೀಳರಿಮೆ ಹೊಂದಿರುವ ಜನರು ಕೋವಿಡ್ ನಂತರವು ಮಾಸ್ಕ್ಗೆ ಅಂಟಿಕೊಂಡಿದ್ದು, ಮುಖವನ್ನು ಮಾಸ್ಕ್ನಿಂದ ಮರೆಮಾಚುವುದನ್ನು ಮುಂದುವರಿಸಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
ಅಧ್ಯಯನದ ವೇಳೆ ಸಂಶೋಧಕರು ಮೂರು ಪ್ರಶ್ನಾವಳಿಗಳನ್ನು ತಯಾರು ಮಾಡಿ ಅದನ್ನು ವಿವಿಧ ಸನ್ನಿವೇಶಗಳಲ್ಲಿ ಸ್ವಯಂ-ಗ್ರಹಿಕೆಯ ಆಕರ್ಷಣೆ ಮತ್ತು ಮಾಸ್ಕ್ ಧರಿಸುವ ಉದ್ದೇಶಗಳ ಬಗ್ಗೆ ಜನರನ್ನು ಕೇಳಿದ್ದಾರೆ. ಅಧ್ಯಯನದ ಅಂತಿಮ ತೀರ್ಮಾನದ ಪ್ರಕಾರ, ತಮ್ಮನ್ನು ತಾವು ಆಕರ್ಷಣೀಯ ಎಂದು ಭಾವಿಸುವ ಯುವ ಮತ್ತು ಮಧ್ಯ ವಯಸ್ಸಿನ ಅಮೆರಿಕನ್ನರು ಮುಖಕ್ಕೆ ಮಾಸ್ಕ್ ಧರಿಸುವುದರಿಂದ ಇತರರ ಕಡೆಗೆ ಪ್ರಭಾವ ಬೀರಲು ಅಥವಾ ಇತರರನ್ನು ತಮ್ಮತ್ತ ಸೆಳೆಯಲು ಅಡ್ಡಿಯಾಗುತ್ತದೆ ಎಂದು ನಂಬಿದ್ದಾರೆ.
ಇನ್ನೊಂದೆಡೆ ತಮ್ಮನ್ನು ತಾವು ಆಕರ್ಷಣೀಯ ಎಂದು ಭಾವಿಸದ ಅಥವಾ ತಾವು ಚೆನ್ನಾಗಿಲ್ಲ ಅಂತಾ ನಂಬಿರುವವರು ಮಾಸ್ಕ್ನ ಹಿಂದೆ ಬಿದ್ದಿದ್ದು, ಮುಖವನ್ನು ಮರೆಮಾಚುವುದು ವಾಸ್ತವವಾಗಿ ತಮ್ಮ ನೋಟವನ್ನು ಹೆಚ್ಚಿಸುತ್ತದೆ ಎಂದು ಭಾವಿಸಿದ್ದಾರೆ.
ಅಂದಹಾಗೆ ಅಮೆರಿಕದಲ್ಲಿ ಆರಂಭದಲ್ಲಿ ಆಂಟಿವೈರಲ್ ರಕ್ಷಣೆಗಾಗಿ ಮಾಸ್ಕ್ ಅನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಆದರೆ, ಅಮೆರಿಕದಲ್ಲಿ ಮಾಸ್ಕ್ ಅನ್ನು ಉಗ್ರ ಸಂಸ್ಕೃತಿಯ ಯುದ್ಧದ ಸಂಕೇತಗಳಲ್ಲಿ ಒಂದು ಎಂದು ಭಾವಿಸಲಾಗಿದೆ. ಅಲ್ಲದೆ, ದೊಡ್ಡ ಪ್ರಮಾಣದಲ್ಲಿ ಸೋಂಕನ್ನು ತಡೆಗಟ್ಟುವಲ್ಲಿ ಮಾಸ್ಕ್ ಪರಿಣಾಮಕಾರಿ ಎಂದು ತೋರಿಸುವ ಯಾವೊಂದು ಉತ್ತಮ ಪುರಾವೆಗಳು ನಮ್ಮ ನಡುವೆ ಕಂಡುಬಂದಿಲ್ಲ. ಆದರೂ ಅದನ್ನು ಎಲ್ಲೆಡೆ ಕಡ್ಡಾಯ ಮಾಡಲಾಗಿತ್ತು.
ದಕ್ಷಿಣ ಕೊರಿಯಾದ ಸಿಯೋಲ್ ನ್ಯಾಷನಲ್ ಯೂನಿವರ್ಸಿಟಿಯ ಸಂಶೋಧಕರು ಸ್ವಯಂ-ಗ್ರಹಿಕೆಯ ಆಕರ್ಷಣೆಯು ಜನರ ಮಾಸ್ಕ್ ಧರಿಸುವ ಉದ್ದೇಶಗಳಲ್ಲಿ ಪಾತ್ರವನ್ನು ವಹಿಸುತ್ತದೆಯೇ ಎಂದು ನೋಡಲು ಬಯಸಿದ್ದರು. ಹೀಗಾಗಿ ಬಿಸಿನೆಸ್ಗಾಗಿ ಇರುವ ಅಮೆಜಾನ್ ಮೆಕ್ಯಾನಿಕಲ್ ಟರ್ಕ್ ಹೆಸರಿನ ಕ್ರೌಡ್‌ಸೋರ್ಸಿಂಗ್ ವೆಬ್‌ಸೈಟ್‌ನಿಂದ ನೇಮಕಗೊಂಡ ಅಮೆರಿಕನ್ನರ ಮೇಲೆ ಮೂರು ಪ್ರಯೋಗಗಳನ್ನು ನಡೆಸಿದರು. ಅಧ್ಯಯನದ ವರದಿಯನ್ನು ಫ್ರಾಂಟಿಯರ್ಸ್ ಇನ್ ಸೈಕಾಲಜಿ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. (ಏಜೆನ್ಸೀಸ್)