ಇಲ್ಲಿ ಕುಸಿತ ಅಲ್ಲಿ ಮೊರೆತ

House destroyed
Published on

ಸುಭಾಸ ಧೂಪದಹೊಂಡ ಕಾರವಾರ
ಅಂಕೋಲಾ ಶಿರೂರಿನಲ್ಲಿ ಗುಡ್ಡ ಕುಸಿತವಾಗಿದೆ. ಆದರೆ, ಅದರಿಂದ ನದಿಯಾಚೆ ದಡದಲ್ಲಿ ಸುಮಾರು‌ ಅರ್ಧ ಕಿಮೀಗೂ ಹೆಚ್ಚು ದೂರದಲ್ಲಿರುವ ಉಳುವರೆ ಗ್ರಾಮ ಸರ್ವ ನಾಶವಾಗಿದೆ.
ಮಂಗಳವಾರ ಗುಡ್ಡ ಕುಸಿದು ಟಿ ಸ್ಟಾಲ್ ಹಾಗೂ ಟ್ಯಾಂಕರ್ ಕೊಚ್ಚಿ ಹೋಗಿದೆ. ಅದರ ಜತೆ ಗುಡ್ಡದಿಂದ ಭಾರಿ ಪ್ರಮಾಣದಲ್ಲಿ ಕಲ್ಲು,ಮಣ್ಣು ನದಿಗೆ ಬಿದ್ದಿದ್ದರಿಂದ ನದಿಯ ನಡುವೆ ಸಣ್ಣ ಮಣ್ಣಿನ ದ್ವೀಪ ಸೃಷ್ಟಿಯಾಗಿದೆ. ನೀರು ಸುನಾಮಿಯಂತೆ ಗ್ರಾಮಕ್ಕೆ ಅಪ್ಪಳಿಸಿದೆ. ಇದರಿಂದ ಗ್ರಾಮದ ಏಳು ಮನೆಗಳು ಸಂಪೂರ್ಣ ನಾಶವಾಗಿದ್ದು, 25 ಕ್ಕೂ ಹೆಚ್ಚು ಮನೆಗಳಿಗೆ, ಕೃಷಿ, ಭೂಮಿಗೆ, ಮೀನುಗಾರಿಕೆ ದೋಣಿ, ಬಲೆಗಳಿಗೆ ಹಾನಿಯಾಗಿದೆ.
ಇಡೀ ಗ್ರಾಮ ಯುದ್ಧದಿಂದ ನಾಶವಾದ ರಣ ಭೂಮಿಯಂತೆ ಭಾಸವಾಗುತ್ತಿದೆ. ನೀಲಾ ಗೌಡ, ಮಂಜುನಾಥ ಗೌಡ ಎಂಬ ಎರಡು ಮನೆಗಳ ನೆಲಟ್ಟು ಮಾತ್ರ ಉಳಿದುಕೊಂಡಿದ್ದು ಅವರು ಅಕ್ಷರಶಃ ನಿರ್ಗತಿಕರಾಗಿದ್ದಾರೆ.‌ ಹಲವರಿಗೆ ಉಡಲು ಒಂದೂ ಬಟ್ಟೆ ಇಲ್ಲ. ಮಲಗಲು ಸೂರಿಲ್ಲ. ಬಂಗಾರ, ತೋಟ ಎಲ್ಲವು ಎಂದರೆ, ಎಲ್ಲವೂ ಕೊಚ್ಚಿ ಹೋಗಿದೆ.
ಕೆಲವು ಮನೆಗಳ ಬಾಗಿಲುಗಳು ಕಿತ್ತು ಕಿಮೀಗಟ್ಟಲೇ ದೂರ ಹೋಗಿ ಬಿದ್ದಿವೆ. ಇನ್ನು ಕೆಲವು ಮನೆಗಳ ಎದುರು 5 ಮೀಟರ್ ವ್ಯಾಸದ ಬೃಹತ್ ಗಾತ್ರದ ಮರದ ದಿಮ್ಮಿಗಳು ಬಂದು ಬಿದ್ದಿವೆ. ತೆಂಗಿನ ಮರಗಳು ಅರ್ಧಕ್ಕೇ ತುಂಡಾಗಿವೆ. ಟಿವಿ, ವಸ್ತ್ರ ಹೀಗೆ ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವ ದೃಶ್ಯ ನೀರಿನ ರಭಸವನ್ನು ಬಿಂಬಿಸುತ್ತವೆ.
ಗ್ರಾಮದ ಸಣ್ಣು ಹನುಮಂತ ಗೌಡ(60) ನಾಪತ್ತೆಯಾಗಿದ್ದು, ಸತತ ಎರಡನೇ ದಿನವೂ ಅವರಿಗಾಗಿ ಹುಡುಕಾಟ ನಡೆಯಿತು. ಉಳಿದ 14 ಜನ ತೀವ್ರವಾಗಿ ಗಾಯಗೊಂಡಿದ್ದು, ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಮನೆಗಿಂತ ಎತ್ತರಕ್ಕೆ ನೀರು ಬಂತು


ನಮ್ಮ ಊರಿನಲ್ಲಿ 27 ಕೃಷಿಕರು, 30 ಮೀನುಗಾರರ ಮನೆಗಳಿವೆ. ಪ್ರತಿ ಮಳೆಗಾಲದಲ್ಲಿ ನಮ್ಮ ಊರಿಗೆ ನೆರೆ ಹಾವಳಿ ಬರುತ್ತದೆ. ಆದರೆ, ಇಂಥ ಸುನಾಮಿ ಎಂದೂ ನೋಡಿಲ್ಲ ಎನ್ನುತ್ತಾರೆ ಉಳುವರೆ ಗ್ರಾಮಸ್ಥ ಕೃಷ್ಣ ಗೌಡ. ಗುಡ್ಡ ಕುಸಿದ ಶಬ್ದ ಬಂತು‌. ನೋಡುತ್ತಿದ್ದಂತೆ ಸುಮಾರು 30 ಅಡಿ ಎತ್ತರದ ಅಲೆ ಬಂದು ಅಪ್ಪಳಿಸಿತು. ವಾಲಿಬಾಲ್ ಗಾತ್ರದ ಕಲ್ಲುಗಳು ಸಿಡಿದು ಬಂದವು. ನಾವೆಲ್ಲ ಓಡಿ ಹೋಗಿ ಕಲ್ಲು,ಗಿಡ ಹಿಡಿದುಕೊಂಡೆವು. ಹಲವರಿಗೆ ಏನೇನೋ ವಸ್ತುಗಳು ಬಂದು ಸಿಡಿದವು ಎಂದು ಭಯಾನಕ ದೃಶ್ಯವನ್ನು ವಿವರಿಸುತ್ತಾರೆ.


ನಾನು ಬಚಾವಾದೆ


"ಶಿರೂರಿನಲ್ಲಿ ಲಕ್ಷ್ಮಣ ನಾಯ್ಕ ಅವರು ನಡೆಸುತ್ತಿದ್ದ ಟಿ ಸ್ಟಾಲ್ ನಲ್ಲಿ ನಾನು ಸಹಾಯಕನಾಗಿದ್ದೆ. ನನ್ನ ಜಮೀನಿನ ನಾಟಿ ಕಾರ್ಯ ಮಾಡಬೇಕಾಗಿರುವುದರಿಂದ ನಾನು ನಾಲ್ಕು ದಿನಗಳಿಂದ ಟಿ ಸ್ಟಾಲ್ ಗೆ ಹೋಗಿರಲಿಲ್ಲ. ಇದರಿಂದ ನಾನು ಬಚಾವಾದೆ" ಎಂದು ಉಳುವರೆ ಗ್ರಾಮದ ಹುಲಿಯಪ್ಪ‌ ಗೌಡ ತಮ್ಮ ಅನುಭವ ಹಂಚಿಕೊಂಡರು. ನಾನು ಕೆಲಸಕ್ಕೆ ಹೋಗದ ಕಾರಣ ಲಕ್ಷ್ಮಣ ನಾಯ್ಕ ತಮ್ಮ ಭಾವನನ್ನು ಕರೆಸಿಕೊಂಡಿದ್ದರು ಎಂದು ಅವರು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net