

ವಿಜಯವಾಣಿ ಸುದ್ದಿಜಾಲ ಗುರುಪುರ
ಭಾರಿ ವಾಹನ ಸಂಚಾರ ನಿಷೇಧಿಸಲ್ಪಟ್ಟ ಉಳಾಯಿಬೆಟ್ಟು ಕಿರು ಸೇತುವೆ ಪ್ರದೇಶಕ್ಕೆ ಡಿವೈಎಫ್ಐ ವಾಮಂಜೂರು ಸ್ಥಳೀಯ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಯಾಣಿಕರ ಅನನುಕೂಲತೆ ತಪ್ಪಿಸಲು ಶೀಘ್ರ ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ.
ಪೊಳಲಿ ಸೇತುವೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಿದ ಸಂದರ್ಭದಲ್ಲೇ ಉಳಾಯಿಬೆಟ್ಟು ಕಿರು ಸೇತುವೆಯಲ್ಲೂ ಭಾರಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಇದರಿಂದ ರಾಷ್ಟ್ರೀಯ ಹೆದ್ದಾರಿ 169ರಿಂದ ಉಳಾಯಿಬೆಟ್ಟು, ಪೆರ್ಮಂಕಿ, ಮೂಡುಜಪ್ಪು ಮತ್ತಿತರ ಪ್ರದೇಶಗಳಿಗೆ ಸಾಗುತ್ತಿದ್ದ ಸರ್ಕಾರಿ ಬಸ್, ಇತರ ಖಾಸಗಿ ಬಸ್ ಹಾಗೂ ಲಾರಿ ಮತ್ತಿತರ ಘನ ವಾಹನ ಸಂಚಾರ ಸ್ಥಗಿತಗೊಂಡಿದೆ. ಶಾಲಾ ಬಸ್ ಸಂಚಾರ ಸ್ಥಗಿತದಿಂದ ವಿದ್ಯಾರ್ಥಿಗಳು ಕಿಲೋಮೀಟರ್ಗಟ್ಟಲೆ ನಡೆದಾಡುವಂತಾಗಿದೆ. ಒಂದೆರಡು ಕಿಲೋಮೀಟರ್ ಅಂತರದ ಸ್ಥಳಗಳಿಗೆ ಸುತ್ತಿ ಬಳಸಿ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ.
ಶಾಲಾ ವಿದ್ಯಾರ್ಥಿಗಳು ಮಾತ್ರವಲ್ಲ ಈ ಭಾಗದ ಕಾರ್ಮಿಕರಿಗೂ ಸಮಸ್ಯೆ ಉಂಟಾಗಿದೆ. ಲಾರಿ ಮತ್ತಿತರ ಭಾರಿ ವಾಹನಗಳು ಸ್ಥಗಿತಗೊಂಡಿರುವುದರಿಂದ ಈ ಭಾಗದ ವಸತಿ ಪ್ರದೇಶಗಳಿಗೆ ಕಲ್ಲು, ಮರಳು ಮತ್ತಿತರ ಕಚ್ಚಾ ಸಾಮಗ್ರಿ ಪೂರೈಕೆ ಕಷ್ಟವಾಗಿದ್ದು, ವಾಹನ ಸಾಗಾಟ ದುಬಾರಿಯಾಗಿದೆ.
ವರ್ಷಗಳ ಹಿಂದೆ ಉಳಾಯಿಬೆಟ್ಟಿನಲ್ಲಿ ಕಿರು ಸೇತುವೆ ನಿರ್ಮಾಣಗೊಂಡ ಸಂದರ್ಭ ಹತ್ತಿರದಲ್ಲೇ ಭಾರಿ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಬಾರಿ ಇಲ್ಲಿ ಅಂತಹ ವ್ಯವಸ್ಥೆ ಕಲ್ಪಿಸಲು ಸಾಧ್ಯವಿದ್ದರೂ ಜಿಲ್ಲಾಡಳಿತ ಮಾತ್ರ ಮೌನ ವಹಿಸಿ ಸಾರ್ವಜನಿಕರ ತಾಳ್ಮೆ ಪರೀಕ್ಷಿಸುತ್ತಿದೆ ಎಂದು ಜನರು ಆರೋಪಿಸುತ್ತಿದ್ದಾರೆ.
ಡಿವೈಎಫ್ಐ ನಿಯೋಗದಲ್ಲಿ ಮನೋಜ್ ವಾಮಂಜೂರು, ಡಿವೈಎಫ್ಐ ವಾಮಂಜೂರು ಪ್ರದೇಶಾಧ್ಯಕ್ಷ ಚಂದ್ರಹಾಸ ತಾರಿಗುಡ್ಡೆ, ಕಾರ್ಯದರ್ಶಿ ದಿನೇಶ್ ಬೊಂಡಂತಿಲ, ಮುಖಂಡರಾದ ಅಶೋಕ್ ಬಂಗೇರ ಸಿಲ್ವರ್ಕೋಡಿ, ಜಯಶೀಲ, ಜಿತೇಶ್ ದೇವಸಬೆಟ್ಟು, ಮಹೇಶ್ ಬೊಂಡಂತಿಲ ಇದ್ದರು.
ಸ್ಥಳೀಯ ಜನಪ್ರತಿನಿಧಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ. ಉಳಾಯಿಬೆಟ್ಟು ಕಿರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸಿದ್ದು, ಇದರ ವರದಿ ಬಹಿರಂಗಗೊಳಿಸಲು ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ ಎಂದು ಸಾರ್ವಜನಿಕ ವಲಯದಿಂದ ಟೀಕೆಗಳು ಕೇಳಿಬರುತ್ತಿವೆ.