

ನವದೆಹಲಿ: ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆ ಮಾಡಲು ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್ಇಟಿ)ಯ ದಿನಾಂಕವನ್ನು ನಿಗದಿ ಪಡಿಸಲಾಗಿದೆ. ಮೇ ತಿಂಗಳ 2ರಿಂದ 17ರವರೆಗೆ ಪರೀಕ್ಷೆ ನಡೆಸುವುದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.
ಜೂನಿಯರ್ ರಿಸರ್ಚ್ ಫೆಲೋಶಿಪ್(ಜೆಆರ್ಎಫ್) ಮತ್ತು ಸಹಾಯಕ ಪ್ರಾಧ್ಯಾಪಕ ಅರ್ಹತೆಗೆ ಪರೀಕ್ಷೆ ನಡೆಸಲಾಗುವುದು. ಮೇ2, 3, 4,4, 5, 6, 7, 10, 11, 12, 14, 17ರಂದು ಪರೀಕ್ಷೆ ನಡೆಯಲಿದೆ ಎಂದು ಸಚಿವರು ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಪರೀಕ್ಷೆ ಬರೆಯಲಿಚ್ಛಿಸುವ ಅಭ್ಯರ್ಥಿಗಳು ಫೆಬ್ರವರಿ 2ರಿಂದಲೇ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮಾರ್ಚ್ 2ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.
ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳು ಇರಲಿವೆ. ಮೊದಲನೇ ಪತ್ರಿಕೆಯಲ್ಲಿ 100 ಅಂಕಗಳಿಗೆ 50 ಪ್ರಶ್ನೆಗಳಿರಲಿದ್ದು, ಎರಡನೇ ಪತ್ರಿಕೆಯಲ್ಲಿ 200 ಅಂಕಗಳಿಗೆ 100 ಪ್ರಶ್ನೆಗಳಿರಲಿವೆ. ಎರಡೂ ಪತ್ರಿಕೆಗೆ ಒಟ್ಟಾರೆಯಾಗಿ 3 ಗಂಟೆಗಳ ಕಾಲಾವಕಾಶ (ಬ್ರೇಕ್ ಇಲ್ಲದೆಯೇ) ಇರಲಿದೆ. ಇದು ಕಂಪ್ಯೂಟರ್ ಆಧಾರಿತ ಟೆಸ್ಟ್ (ಸಿಬಿಟಿ) ಆಗಿರಲಿದೆ. (ಏಜೆನ್ಸೀಸ್)