ಓದಿನೊಂದಿಗೆ ಬದುಕಿನ ಮೌಲ್ಯ ಕಲಿಯಿರಿ...

Book Bhandaara
Published on

ಉಪನ್ಯಾಸಕಿ ರತ್ನಮಾಲಾ ಸಲಹೆ

ಕಾಲೇಜು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಒಂದು ಕಾಲದಲ್ಲಿ ಸಮಾಜದ ಕೆಳಸ್ತರದ ಮಂದಿಗೆ ಶಿಕ್ಷಣ ಗಗನ ಕುಸುಮವಾಗಿತ್ತು. ಆದರೀಗ ಕಡ್ಡಾಯ ಶಿಕ್ಷಣದ ವ್ಯವಸ್ಥೆಯಿಂದ ಎಲ್ಲರೂ ಶಾಲೆಯನ್ನು ಕಾಣುವಂತಾಗಿದೆ. ಮಕ್ಕಳು ಓದಿನೊಂದಿಗೆ ಎದುರಾಗುವ ಸವಾಲು ಸ್ವೀಕರಿಸಿ ಬದುಕಿನ ಮೌಲ್ಯಗಳನ್ನೂ ಕಲಿಯಬೇಕಾಗಿದೆ ಎಂದು ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ರತ್ನಮಾಲಾ ಸಲಹೆ ನೀಡಿದರು.

ಉದ್ಯಾವರದ ಹಿಂದು ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್​ ಸರ್ಕಲ್​ ಆಶ್ರಯದಲ್ಲಿ ಜೂನ್ 1ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುಎಫ್​ಸಿ ಪುಸ್ತಕ ಭಂಡಾರದಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯ-ಪುಸ್ತಕ ವಿತರಿಸಿ ಮಾತನಾಡಿದರು.

ಪ್ರಾಮಾಣಿಕತೆ ಅಗತ್ಯ

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶಕುಮಾರ್​ ಮಾತನಾಡಿ, ನಮ್ಮ ಸಂಸ್ಥೆ ಬುಕ್​ ಬ್ಯಾಂಕ್​ ಸ್ಥಾಪಿಸಿ 20ಕ್ಕೂ ಹೆಚ್ಚು ವರ್ಷದಿಂದ ವಿದ್ಯಾರ್ಥಿಗಳಿಗೆ ಪುಸ್ತಕ ನೀಡುತ್ತಿದ್ದೇವೆ. ನಿಯಮದ ಅನುಸಾರ ಪಡೆದ ಪುಸ್ತಕವನ್ನು ಶೈಕ್ಷಣಿಕ ವರ್ಷ ಮುಕ್ತಾಯದ ಬಳಿಕ ಬುಕ್​ ಬ್ಯಾಂಕ್​ಗೆ ಹಿಂತಿರುಗಿಸಬೇಕು. ಆದರೆ, ವರ್ಷದಿಂದ ವರ್ಷಕ್ಕೆ ಪುಸ್ತಕ ಹಿಂತಿರುಗಿಸದಿರುವ ವಿದ್ಯಾರ್ಥಿಗಳ ಸಂಖ್ಯೆ ಬೆಳೆಯುತ್ತಿದೆ. ಇದು ಅಪ್ರಾಮಾಣಿಕತನವಾಗಿದೆ. ತಾವು ಪಡೆದ ಪುಸ್ತಕವನ್ನು ಮುಂದಿನ ವರ್ಷ ಬೇರೆ ವಿದ್ಯಾರ್ಥಿಗಳು ನಿರೀಕ್ಷಿಸುತ್ತಾರೆ. ಸಕಾಲದಲ್ಲಿ ಅದನ್ನು ಹಿಂತಿರುಗಿಸಬೇಕು ಎಂದರು.

ಸಂಸ್ಥೆಯ ನಿರ್ದೇಶಕ ಶರತ್​ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಗಿರೀಶ ಗುಡ್ಡೆಯಂಗಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಹೇಲ್​ ರಹಮತ್ತುಲ್ಲ ವಂದಿಸಿದರು. ಮಾಜಿ ಅಧ್ಯಕ್ಷ ತಿಲಕರಾಜ್​ ಸಾಲ್ಯಾನ್​ ಫಲಾನುಭವಿಗಳ ಹೆಸರು ವಾಚಿಸಿದರು. ಮಾಜಿ ಅಧ್ಯಕ್ಷ ಅನೂಪಕುಮಾರ್​ ಕಾರ್ಯಕ್ರಮ ನಿರ್ವಹಿಸಿದರು. 150ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

ಕರೋನಾ ಸಮಯದಲ್ಲಿ ಶಿಕ್ಷಣಕ್ಕೆ ಮೊಬೈಲ್​ ಅನಿವಾರ್ಯವಾಗಿತ್ತು. ಆದರೆ, ಕರೋನಾ ಮುಗಿದ ಬಳಿಕವೂ ವಿದ್ಯಾರ್ಥಿಗಳು ಮೊಬೈಲ್​ಗೆ ಅತಿಯಾಗಿ ಅಂಟಿಕೊಂಡಿದ್ದು, ಶಿಕ್ಷಣಕ್ಕೆ ಮಾರಕ ಬೆಳವಣಿಗೆಯಾಗಿದೆ. ಅಗತ್ಯವಿದ್ದಾಗ ಮಾತ್ರ ಬಳಸಿ, ಇಲ್ಲವಾದರೆ ಮೊಬೈಲ್​ನಿಂದ ದೂರವಿರಿ. | ರತ್ನಮಾಲಾ. ಕನ್ನಡ ಉಪನ್ಯಾಸಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net