

ಉಡುಪಿ: ಜಿಲ್ಲೆಯಲ್ಲಿ ಫ್ರೂಟ್ಸ್ ತಂತ್ರಾಂಶದಡಿ ಶೇ. 100 ರಷ್ಟು ಗುರಿ ಸಾಧನೆಗೆ ಸರ್ಕಾರ ಆದೇಶಿಸಿದ್ದು, ಈವಾರದೊಳಗೆ ಶೇ. 75 ರಷ್ಟು ಗುರಿ ಸಾಧಿಸುವುದಕ್ಕೆ ಜಿಲ್ಲಾಧಿಕಾರಿ ಗುಡುವು ನೀಡಿದ್ದಾರೆ ಎಂದು ಉಡುಪಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ, ಭೂ ಕಂದಾಯ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ ಹೇಳಿದ್ದಾರೆ.
ಬುಧವಾರ ಉಡುಪಿ ತಾಲೂಕು ಪಂಚಾಯಿತಿ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಉಡುಪಿ, ತುಮಕೂರು, ದಕ್ಷಿಣ ಕನ್ನಡ ಹಾಗೂ ಕೋಲಾರ ಜಿಲ್ಲೆ ತಂತ್ರಾಂಶ ನೋಂದಣಿಯಲ್ಲಿ ಹಿಂದಿದ್ದು, ಒಂದು ವೇಳೆ ಈ ಗುರಿ ಸಾಧಿಸುವುದಕ್ಕೆ ಸಾಧ್ಯವಾಗದೇ ಹೋದರೆ ಶನಿವಾರ, ಭಾನುವಾರ ಹಾಗೂ ಸೋಮವಾರ ಕಡ್ಡಾಯ ಕೆಲಸ ಮಾಡುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಬಹುದು ಎಂದರು.
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್ ಎಲ್. ಮಾತನಾಡಿ, ಉಡುಪಿಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರಕ್ಕೆ 1.93 ಕೋಟಿ ರೂ. ಪ್ರೀಮಿಯಂ ಸಂಗ್ರಹವಾಗಿದೆ. ಕೆಲವೊಂದು ತಾಂತ್ರಿಕ ಅಡೆತಡೆಯಿಂದ ಕೆಲವೊಬ್ಬರ ಖಾತೆಗೆ ಹಣ ಜಮೆ ಆಗುತ್ತಿಲ್ಲ. ಸರ್ಕಾರ ಯಾವುದೇ ಪರಿಹಾರ, ಸವಲತ್ತು ಸಿಗಬೇಕಾದರೂ ್ರೂರ್ಟ್ಸ್ ತಂತ್ರಾಂಶದಲ್ಲಿ ಸರಿಯಾಗಿ ನೋಂದಣಿಯಾಗಿರಬೇಕು ಎಂದರು/
ಕೋವಿಡ್ ತಪಾಸಣೆಗೆ ಸೂಚನೆ
ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ್ ಉಪಾಧ್ಯಾಯ, ಕೋವಿಡ್ ತಪಾಸಣೆ ಹೆಚ್ಚಿಸಲು ಸರ್ಕಾರ ಸೂಚನೆ ನೀಡಿದ್ದು, ಜ್ವರದೊಂದಿಗೆ ಶೀತ, ಕೆಮ್ಮು ರೋಗ ಲಕ್ಷಣವಿದ್ದರೆ ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ಪರೀಕ್ಷೆ ಮಾಡಿಕೊಳ್ಳಬೇಕು. ಪಾಸಿಟಿವ್ ಪತ್ತೆಯಾದರೆ ಪ್ರತ್ಯೇಕವಾಗಿ ಐಸೋಲೆಟ್ನಲ್ಲಿ ಇರಬೇಕೆಂದು ತಿಳಿಸಿದ್ದಾರೆ.
60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ರಾಜ್ಯದ ಸರ್ಕಾರದ ಮಾರ್ಗಸೂಚಿಯನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲನೆ ಮಾಡಬೇಕು. ಜ್ವರ, ಶೀತ ಲಕ್ಷಣವಿರುವ ಅನೇಕರು ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ಸೂಕ್ತ ವ್ಯವಸ್ಥೆಗಳಿವೆ ಎಂದರು.
ಬೀದಿ ನಾಯಿ ಸಮಸ್ಯೆ
ಪಶುಸಂಗೋಪಾಲನೆ ಇಲಾಖೆಯ ಅಧಿಕಾರಿ ಮಾತನಾಡಿ, ಪ್ರತಿಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವುದಕ್ಕೆ ಕಾರ್ಯಕ್ರಮ ಹಾಕಿಕೊಂಡಿದ್ದು, 16 ಗ್ರಾ.ಪಂ. ಪೈಕಿ 3 ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ 100ಕ್ಕೂ ಅಧಿಕ ಶ್ವಾನಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪಂಚಾಯಿತಿನ ಅನುದಾನದಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ಅವಕಾಶವಿದೆ ತಿಳಿಸಿದ್ದಾರೆ. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯಾ, ಲೆಕ್ಕಾಧಿಕಾರಿ ಮೆಲ್ವಿನ್ ಥಾಮಸ್ ಉಪಸ್ಥಿತರಿದ್ದರು.